ರಾಯ್ಪುರ(ಮಾ.14): ಸಿಕ್ಸರ್‌ ಕಿಂಗ್‌ ಖ್ಯಾತಿಯ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ ಟಿ20 ಟೂರ್ನಿಯಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ವಿರುದ್ದ ಸತತ 4 ಎಸೆತಗಳಲ್ಲಿ 4 ಸಿಕ್ಸರ್‌ ಸಿಡಿಸಿ ತಮ್ಮ ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಿದ್ದಾರೆ. 

ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ ಟಿ20 ಟೂರ್ನಿಯ 13ನೇ ಪಂದ್ಯದಲ್ಲಿ ಯುವಿ ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 52 ರನ್‌ ಬಾರಿಸಿ ತಮ್ಮ ಖದರ್‌ ಅನಾವರಣ ಮಾಡಿದರು. ಪಂದ್ಯದ 18ನೇ ಓವರ್ ಬೌಲಿಂಗ್‌ ಮಾಡಿದ ಜಂಡರ್‌ ಡೆ ಬೃಯನ್‌ ಬೌಲಿಂಗ್‌ನಲ್ಲಿ ಸತತ 4 ಸಿಕ್ಸರ್‌ ಚಚ್ಚುವ ಮೂಲಕ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ ಕ್ಷಣವನ್ನು ನೆನಪು ಮಾಡಿಸಿದರು. 

ರೋಡ್ ಸೇಫ್ಟಿ ಸರಣಿ: ಸೌತ್ ಆಫ್ರಿಕಾ ವಿರುದ್ಧ ಸತತ 4 ಸಿಕ್ಸರ್ ಸಿಡಿಸಿ ಮಿಂಚಿದ ಯುವಿ!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಯುವರಾಜ್ ಸಿಂಗ್, ನಾನು ಸತತ 5ನೇ ಸಿಕ್ಸರ್‌ ಚಚ್ಚಬೇಕು ಎಂದು ಯೋಚನೆ ಮಾಡಿದ್ದೆ. ನಾನು ಅಂದುಕೊಂಡ ಕಡೆ ಬೌಲರ್‌ ಬೌಲಿಂಗ್‌ ಮಾಡಬಹುದು ಎಂದು ಊಹಿಸಿದ್ದೆ. 4 ಸಿಕ್ಸರ್‌ ಬಳಿಕ ನಾನು 5ನೇ ಸಿಕ್ಸರ್‌ ಬಾರಿಸಬಹುದಿತ್ತು. ಅದರೆ ಕೊನೆಯವರೆಗೂ ಬ್ಯಾಟಿಂಗ್‌ ಮಾಡಬೇಕು ಎಂದು ತೀರ್ಮಾನಿಸಿ ಐದನೇ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಪ್ರಯತ್ನ ಮಾಡಲಿಲ್ಲ. ನಾನು ಕೊನೆಯವರೆಗೂ ಬ್ಯಾಟಿಂಗ್‌ ಮಾಡಿ ಅಜೇಯನಾಗುಳಿದಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಯುವಿ ಹೇಳಿದ್ದಾರೆ.

ಹೀಗಿತ್ತು ನೋಡಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ವಿರುದ್ದ ಯುವಿ ಇನಿಂಗ್ಸ್:

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಲೆಜೆಂಡ್ಸ್‌ ತೆಂಡುಲ್ಕರ್(60) ಹಾಗೂ ಯುವರಾಜ್ ಸಿಂಗ್(52) ಆಕರ್ಷಕ ಶತಕಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 204 ರನ್‌ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು ಕೇವಲ 148 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ ಲೆಜೆಂಡ್ಸ್‌ 56 ರನ್‌ಗಳ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.