ನಾಯಕನಾಗಿ ಒಂದೂ ಐಸಿಸಿ ಟ್ರೋಫಿ ಜಯಿಸದ ವಿರಾಟ್ ಕೊಹ್ಲಿಆದರೆ ನನ್ನನ್ನು ನಾನು ವಿಫಲ ನಾಯಕ ಎನಿಸಿಕೊಳ್ಳಲಾರೆ ಎಂದ ಕೊಹ್ಲಿತಂಡವಾಗಿ ಉತ್ತಮ ಆಟವಾಡುವುದು ಮುಖ್ಯವೆಂದ ಮಾಜಿ ನಾಯಕ

ನವ​ದೆ​ಹ​ಲಿ(ಫೆ.26): ಐಸಿಸಿ ಟ್ರೋಫಿ ಗೆಲ್ಲದ ಕಾರಣ ತಮ್ಮನ್ನು ಕ್ರೀಡಾ ತಜ್ಞರು, ಅಭಿ​ಮಾ​ನಿ​ಗಳು ವಿಫಲ ನಾಯಕ ಎಂದು ಪರಿ​ಗ​ಣಿ​ಸಿ​ದರು ಎಂದು ಭಾರ​ತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮಾರ್ಮಿಕವಾಗಿ ನುಡಿದಿದ್ದಾರೆ. 

ಈ ಬಗ್ಗೆ ಆರ್‌​ಸಿಬಿ ಜೊತೆ​ಗಿನ ಸಂದ​ರ್ಶ​ನ​ದಲ್ಲಿ ಮಾತ​ನಾ​ಡಿದ ಅವರು, ‘ಎ​ಲ್ಲರೂ ಟ್ರೋಫಿ ಗೆಲ್ಲ​ಲೆಂದೇ ಆಡು​ತ್ತಾರೆ. ನಾವೂ ಅದ​ಕ್ಕಾ​ಗಿಯೇ ಆಡಿ​ದ್ದೇವೆ. ನನ್ನ ಅವ​ಧಿ​ಯಲ್ಲಿ ಭಾರತ 2017ರ ಚಾಂಪಿ​ಯನ್ಸ್‌ ಟ್ರೋಫಿ ಫೈನ​ಲ್‌, 2019ರ ಏಕ​ದಿನ ವಿಶ್ವ​ಕಪ್‌ ಸೆಮಿ​ಫೈ​ನ​ಲ್‌, 2021ರ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಆಡಿ​ದ್ದೆವು. ಹೀಗಿದ್ದರೂ ನನ್ನ​ನ್ನು ವಿಫಲ ನಾಯಕ ಎಂದೇ ಗುರು​ತಿ​ಸಿ​ದರು. ಆದರೆ ನನ್ನನು ನಾನು ವಿಫಲ ಎಂದು ಪರಿ​ಗ​ಣಿ​ಸು​ವು​ದಿಲ್ಲ. ತಂಡ​ವಾಗಿ ಉತ್ತಮ ಆಟ​ವಾ​ಡಿ ಗೆಲ್ಲು​ವು​ದು ಮುಖ್ಯವೇ ಹೊರತು ಕೇವಲ ಟ್ರೋಫಿ ಗೆಲ್ಲು​ವು​ದ​ಲ್ಲ’ ಎಂದು ಹೇಳಿ​ದರು.

"ಒಂದು ತಂಡವಾಗಿ ನಾವು ಏನೆಲ್ಲಾ ಸಾಧನೆ ಮಾಡಿದೆವು ಎನ್ನುವುದು ಮುಖ್ಯವೋ ಅದೇ ರೀತಿ ತಂಡದಲ್ಲಿನ ವಾತವಾರಣವು ಎಷ್ಟು ಬದಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಟೂರ್ನಿಗಳು ಒಂದು ಸಮಯದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ತಂಡದಲ್ಲಿ ಇರುವ ಸಂಸ್ಕೃತಿ ದೀರ್ಘಕಾಲ ಮುಂದುವರೆಯುತ್ತದೆ. ಅದಕ್ಕಾಗಿ ನಾವು ನಿರಂತರವಾಗಿ ಸ್ಥಿರತೆ ಹೊಂದಿರಬೇಕು. ಅದಕ್ಕಾಗಿ ನಾವು ಬದ್ದತೆಯನ್ನು ಹೊಂದಿರಬೇಕು ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

IPL 2023: ಇಲ್ಲಿದೆ ನೋಡಿ ನಮ್ಮ RCB ತಂಡದ ಸಂಪೂರ್ಣ ವೇಳಾಪಟ್ಟಿ..!

Scroll to load tweet…

ನಾಯಕನಾಗಿ ವಿರಾಟ್ ಕೊಹ್ಲಿಯ ಸಾಧನೆಯನ್ನು ನೋಡುವುದಾದರೇ:

ಟೆಸ್ಟ್‌ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ 68 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 40 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಇನ್ನು 50 ಟಿ20 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 30 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇದಷ್ಟೇ ಅಲ್ಲದೇ 95 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿ 65 ಪಂದ್ಯಗಳಲ್ಲಿ ಭಾರತ ಗೆಲುವಿನ ಕೇಕೆ ಹಾಕುವಂತೆ ಮಾಡಿದ್ದರು. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಮೊದಲ ಬಾರಿಗೆ(2018-19) ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲೂ ಏಕದಿನ ಸರಣಿ ಗೆದ್ದು ಮಿಂಚಿನ ಪ್ರದರ್ಶನ ತೋರಿತ್ತು. 

2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ, ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಅಚ್ಚರಿಯ ರೀತಿಯಲ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದರ ಬೆನ್ನಲ್ಲೇ ಕೊಹ್ಲಿ ಕೂಡಾ ದಿಢೀರ್ ಎನ್ನುವಂತೆ ಟೆಸ್ಟ್‌ ತಂಡದ ನಾಯಕತ್ವಕ್ಕೂ ಗುಡ್‌ ಬೈ ಹೇಳಿದ್ದರು. 2019 ಕೊನೆಯಿಂದ 2021ರವರೆಗೆ ವಿರಾಟ್ ಕೊಹ್ಲಿ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬಾಲ್ಯದ ಕೋಚ್, ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನೆರವಿಗೆ ಬಂದಿದ್ದರು ಎಂದು ಆರ್‌ಸಿಬಿ ಪಾಡ್‌ಕಾಸ್ಟ್ ವೇಳೆ ವಿರಾಟ್ ಕೊಹ್ಲಿ ಹೇಳಿದ್ದಾರೆ.