ಗಂಗೂಲಿ ಹಂಚಿಕೊಂಡ ತಮ್ಮ ಜರ್ನಿ ವಿಡಿಯೋದಲ್ಲಿ ಎಡವಟ್ಟು, ಇರ್ಫಾನ್ ಪಠಾಣ್ ಪೋಟೋ ಪೋಸ್ಟ್!
ಸೌರವ್ ಗಂಗೂಲಿ ಜುಲೈ 8 ರಂದು 51ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ವೇಳೆ ಗಂಗೂಲಿ ತಮ್ಮ ಕ್ರಿಕೆಟ್ ಜರ್ನಿ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಗಂಗೂಲಿ ತಮ್ಮ ಫೋಟೋ ಬದಲು ಇರ್ಫಾನ್ ಪಠಾಣ್ ಫೋಟೋ ಹಾಕಿದ್ದಾರೆ. ಈ ತಪ್ಪನ್ನು ಖುದ್ದು ಇರ್ಫಾನ್ ಪಠಾಣ್ ಬೊಟ್ಟು ಮಾಡಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ(ಜು.09) ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ, ಅಗ್ರೆಸ್ಸೀವ್ ಕ್ರಿಕೆಟಿಗ ಸೌರವ್ ಗಂಗೂಲಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜುಲೈ 8 ರಂದು ಸೌರವ್ ಗಂಗೂಲಿ 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಗಂಗೂಲಿ ಟ್ವಿಟರ್ ಮೂಲಕ ತಮ್ಮ ಕ್ರಿಕೆಟ್ ಜರ್ನಿ ಫೋಟೋಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಗಂಗೂಲಿ ವಿಡಿಯೋದ ತಪ್ಪನ್ನು ಹುಡುಕಿ ತೆಗೆದಿದ್ದಾರೆ. ಗಂಗೂಲಿ ತಮ್ಮ ಬ್ಯಾಟಿಂಗ್ ಫೋಟೋ ಎಂದು ಇರ್ಫಾನ್ ಪಠಾಣ್ ಬ್ಯಾಟಿಂಗ್ ಫೋಟೋ ಹಾಕಿದ್ದರೆ. ಇದಕ್ಕೆ ಪ್ರತಿಕ್ರಿಯೆಸಿದ ಇರ್ಫಾನ್ ಪಠಾಣ್, ಬ್ಯಾಟಿಂಗ್ ಮಾಡುವಾಗ ನಾವಿಬ್ಬರು ಒಂದೇ ರೀತಿ ಕಾಣುತ್ತಿದ್ದೇವೆ ಅನ್ನೋದು ನನಗೂ ಗೊತ್ತಿರಲಿಲ್ಲ ಎಂದಿದ್ದಾರೆ.
ಸೌರವ್ ಗಂಗೂಲಿ ಟೀಂ ಇಂಡಿಯಾ ಪರ ಆಡಿದ ಹಲವು ಫೋಟೋಗಳನ್ನು ಒಟ್ಟುಗೂಡಿಸಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗಂಗೂಲಿ ಟೆಸ್ಟ್ ಶತಕ, ನಾಟ್‌ವೆಸ್ಟ್ ಸರಣಿ ಗೆಲುವು, ದ್ವಿಪಕ್ಷೀಯ ಸರಣಿ ಗೆಲುವು, ಅಭ್ಯಾಸ, ಏಕದಿನ ವಿಶ್ವಕಪ್ ಫೈನಲ್, ರೋಚಕ ಬ್ಯಾಟಿಂಗ್ ಸೇರಿದಂತೆ ಹಲವು ಫೋಟೋಗಳಿವೆ. ಆದರೆ ಒಂದು ಫೋಟೋ ತಪ್ಪಾಗಿದೆ. ತಮ್ಮ ಫೋಟೋ ಎಂದು ಗಂಗೂಲಿ, ಇರ್ಫಾನ್ ಪಠಾಣ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೌರವ್ ಗಂಗೂಲಿ 51ನೇ ಹುಟ್ಟುಹಬ್ಬ: ದಾದಾ ಹೆಜ್ಜೆಗುರುತುಗಳಿವು..!
ಗಂಗೂಲಿ ಟ್ವೀಟ್‌ಗೆ ರಿಪ್ಲೈ ಮಾಡಿರುವ ಇರ್ಫಾನ್ ಪಠಾಣ್, ದಾದಿ, ಬ್ಯಾಟಿಂಗ್ ಮಾಡುವಾಗ ನಾವಿಬ್ಬರು ಒಂದೇ ರೀತಿ ಕಾಣುತ್ತೇವೆ ಅನ್ನೋದು ಗೊತ್ತಿರಲಿಲ್ಲ. ಇದರಿಂದ ನಿಮಗೂ ಕನ್ಫ್ಯೂಸ್ ಆಗಿದೆ. ಈ ಫೋಟೋವನ್ನು ನಾನು ಅಭಿನಂದನೆಯಾಗಿ ತೆಗೆದುಕೊಳ್ಳುತ್ತೇನೆ. ಧನ್ಯವಾದ ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
ಹುಟ್ಟು ಹಬ್ಬ ಆಚರಿಸಿಕೊಂಡ ಗಂಗೂಲಿಗೆ ಅವಕಾಶ ಹಾಗೂ ಅದೃಷ್ಟ ಹೆಚ್ಚಾಗಿದೆ. ಕಾರಣ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೌರವ್ ಗಂಗೂಲಿಯನ್ನು ಮುಖ್ಯ ಕೋಚ್ ಆಗಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಕಳೆದೆರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್‌ಗೆ ಕೊಕ್ ನೀಡುವ ಸಾಧ್ಯತೆಯಿದ್ದು, ತಂಡದ ಕ್ರಿಕೆಟ್ ನಿರ್ದೇಶಕರಾಗಿರುವ ಸೌರವ್ ಗಂಗೂಲಿ ನೂತನ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪಾಂಟಿಂಗ್ 2018ರಿಂದಲೂ ಡೆಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2020ರಲ್ಲಿ ಮೊದಲ ಬಾರಿ ಡೆಲ್ಲಿ ಫೈನಲ್ ಪ್ರವೇಶಿಸಿತ್ತು. 2021ರಲ್ಲಿ ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದರೂ ಫೈನಲ್ಗೇರಿರಲಿಲ್ಲ.
ಅಜಿಂಕ್ಯ ರಹಾನೆಗೆ ಉಪನಾಯಕತ್ವ ನೀಡಿದ್ದಕ್ಕೆ ಸೌರವ್ ಗಂಗೂಲಿ ವ್ಯಂಗ್ಯ..!