ಬೆಂಗಳೂರು(ಮೇ.16) ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಇಲ್ಲದೆ ಇದ್ದಿದ್ದರೆ ನಾನು 2007 ರ ಏಕದಿನ  ವಿಶ್ವಕಪ್ ನಲ್ಲಿ ಆಡುತ್ತಲೇ ಇರಲಿಲ್ಲ ಎಂದು ಕೇರಳ ಎಕ್ಸಪ್ರೆಸ್ ಎಸ್. ಶ್ರೀಶಾಂತ್ ಹೇಳಿದ್ದಾರೆ. 

ನಾನು ಯಾವತ್ತೂ ರಾಹುಲ್ ದ್ರಾವಿಡ್ ಅವರನ್ನು ವಿರೋಧಿಸಿಲ್ಲ, ಅವರಿಗೆ ಅಗೌರವ ಉಂಟಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ರಾಹುಲ್ ದ್ರಾವಿಡ್ ಜೊತೆ ನಾನು ಕಿತ್ತಾಟ ಮಾಡಿಕೊಂಡಿದ್ದೇನೆ ಎನ್ನುವುದು ಸುಳ್ಳು ಎಂದು ವಿವಾದಿತ ಕ್ರಿಕೆಟಿಗ ಶ್ರೀಶಾಂತ್ ಹೇಳಿದ್ದಾರೆ.

ನನ್ನ ಬಗ್ಗೆ ಭಾರತ ತಂಡದ ಮಾಜಿ ಫಿಸಿಯೋ ಪ್ಯಾಡಿ ಆಪ್ಟನ್ ತಮ್ಮ ಪುಸ್ತಕದಲ್ಲಿ ಸುಳ್ಳು ವಿಷಯಗಳನ್ನು ಬರೆದಿದ್ದಾರೆ. ನಾನು ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿಯನ್ನು ವಿರೋಧ ಮಾಡುತ್ತೇನೆ ಎಂದೆಲ್ಲ ಬರೆದಿದ್ದಾರೆ. ಪ್ಯಾಡಿ ಆಪ್ಟನ್ ನನ್ನ ಬಗ್ಗೆ ಬರೆದಾಗ ಬಹಳ ಬೇಜಾರಾಗಿತ್ತು. ನಾನು ಅವರಿಗೆ ಬಹಳ ಗೌರವ ಕೊಡುತ್ತಿದ್ದೆ. ಅವರು ಹೀಗೆಲ್ಲ ಬರೆಯುತ್ತಾರೆ ಅಂದುಕೊಂಡಿರಲಿಲ್ಲ. ನನ್ನ ಬಗ್ಗೆ ಯಾಕೆ ಈ ರೀತಿ ಬರೆದರೂ ಎನ್ನುವುದನ್ನು ಪ್ಯಾಡಿ ಆಪ್ಟನ್ ಬಳಿಯೇ ಕೇಳಬೇಕು. ನನ್ನ ಬಗ್ಗೆ ಬರೆದರೆ ಅವರ ಪುಸ್ತಕ ಹೆಚ್ಚು ಮಾರಾಟವಾಗುತ್ತದೆ ಅಂದುಕೊಂಡಿರಬಹುದು. ಆದರೆ ನಾನು ಹೇಳುವುದಿಷ್ಟೇ,  ನನ್ನ ಬಗ್ಗೆ ಬರೆದು ದುಡ್ಡು ಮಾಡಿಕೊಳ್ಳುತ್ತೀರಿ ಎಂದಾದರೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಖಂಡಿತವಾಗಿಯೂ ಬರೆಯಿರಿ  ಎಂದು ಶ್ರೀಶಾಂತ್ ಹೇಳಿದ್ದಾರೆ.

ದ್ರಾವಿಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಂತೆ ಶ್ರೀಶಾಂತ್‌!

ನಾನು ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ವಿರೋಧಿಸುತ್ತೀನಿ ಎನ್ನುವುದಕ್ಕಿಂತ ಹೆಚ್ಚಾಗಿ ಹಳದಿ ಬಣ್ಣವನ್ನು ವಿರೋಧಿಸುತ್ತೀನಿ ಅಂದರೆ ಸರಿ ಆಗುತ್ತದೆ. ಆಸ್ಟ್ರೇಲಿಯಾ ಕೂಡ ಹಳದಿ ಬಣ್ಣದ ಜೆರ್ಸಿ ಹೊಂದಿದೆ. ಧೋನಿ ವಿಕೆಟ್ ಕೂಡ ಪಡೆದು ಖುಷಿ ಪಟ್ಟಿದ್ದೆ. ಚೆನ್ನೈ ತಂಡ ಆಗಲೂ ಈಗಲೂ ಬಹಳ ಬಲಶಾಲಿ ತಂಡ. ಅದನ್ನು ಸೋಲಿಸುವುದು ಕೂಡ ಬಹಳ ಸಂತೋಷ ತರುವ ವಿಚಾರ. 

ನನಗೆ ಚೆನ್ನೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡಲು ಅವಕಾಶ ನೀಡಲಿಲ್ಲ. ಆದರೆ ನಾನು ಆ ವೇಳೆ ಅಭಿಮಾನಿಗಳು ಹೇಗೆ ಸಂಭ್ರಮಾಚರಣೆ ಮಾಡುತ್ತಾರೋ ಹಾಗೆ ಕೂಗಿ, ಖುಷಿ ಪಡುತ್ತಿದ್ದೆ.  ಚೆನ್ನೈ ವಿರುದ್ಧ ರಾಜಸ್ತಾನ ಪಂದ್ಯ ಗೆದ್ದಾಗ ನಾನು ಮೊದಲನೆಯದಾಗಿ ಹೋಗಿ ಅಭಿನಂದನೆ ತಿಳಿಸಿದೆ. ಹಾಗೆಯೇ ದ್ರಾವಿಡ್ ಅವರನ್ನು ಅಭಿನಂದಿಸಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

ನಾನು ಮ್ಯಾಚ್ ಫಿಕ್ಸಿಂಗ್ ಘಟನೆ ಸಂದರ್ಭದಲ್ಲಿ 6 ರಿಂದ 7 ತಿಂಗಳ ಕಾಲ ಖಿನ್ನತೆಯಿಂದ ಬಳಲಿದ್ದೆ. ನಾನು ಈ ಬಗ್ಗೆ ಪುಸ್ತಕವನ್ನೂ ಬರೆಯುತ್ತಿದ್ದೇನೆ. ನಾನು ಕ್ರಿಕೆಟ್ ಗೆ ಮರಳುತ್ತೇನೆ. ಆಮೇಲೆ ಈ ಪುಸ್ತಕ ಪ್ರಕಟಿಸುತ್ತೇನೆ. ಆ ಪುಸ್ತಕದಲ್ಲಿ ಎಲ್ಲವನ್ನೂ ಬರೆಯುತ್ತೇನೆ. ನನ್ನ ಬದುಕಿನಲ್ಲಿ ಏನೇನಾಯಿತೋ ಎಲ್ಲವನ್ನೂ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಎನ್ನುವುದು ಒಂದು ಚಾಲೆಂಜಿಂಗ್ ಆಟ. ಚಾಲೆಂಜಿಂಗ್ ಆಟವನ್ನು ಎಲ್ಲರು ಇಷ್ಟ ಪಡುತ್ತಾರೆ. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಐಸಿಸಿ  ಏನು ನಿಯಮ ಮಾಡಿರುತ್ತದೆಯೋ ಅದರಂತೆ ನಡೆಯುವುದು ಮುಖ್ಯ. ಯುವಿ, ರವಿಶಾಸ್ತ್ರಿ, ಗಿಬ್ಸ್  ಆರು ಬಾಲ್ ಗೆ ಆರು ಸಿಕ್ಸ್  ಹೊಡೆಯಬಹುದಾದರೆ ಬೌಲರ್ ಯಾಕೆ ಆರು ಬಾಲ್ ಗೆ ಯಾಕೆ ಆರು ವಿಕೆಟ್ ಕೀಳಲು ಸಾಧ್ಯವಿಲ್ಲ? ಬೌಲರ್ ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇರಲಿ ಎಂದು ಕೇರಳ ಎಕ್ಸ್‌ಪ್ರೆಸ್ ಹೇಳಿದ್ದಾರೆ.