ಸಿಡ್ನಿ(ಜ.12): ಎದುರಾಳಿ ತಂಡದ ಆಟಗಾರರನ್ನು ಔಟ್‌ ಮಾಡಲು ಯಾವ ಮಟ್ಟಕ್ಕಾದರೂ ಇಳಿಯಲು ಹಿಂಜರಿಯದ ಆಸ್ಟ್ರೇಲಿಯಾ ಆಟಗಾರರು ಇದೀಗ ಮತ್ತೊಮ್ಮೆ ತಮ್ಮ ಕುಕೃತ್ಯ ಮೆರೆದಿರುವುದು ಕ್ರಿಕೆಟ್‌ ಜಗತ್ತಿನ ಮುಂದೆ ಅನಾವರಣವಾಗಿದೆ.

ಆಟದ ಮೂಲಕ ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗದಿದ್ದಾಗ ಕಾಂಗರೂ ಪಡೆಯ ಆಟಗಾರರು ಸ್ಲೆಡ್ಜಿಂಗ್‌ ಮಾಡುವುದು ಸಾಮಾನ್ಯ. ಸ್ಲೆಂಡ್ಜಿಂಗ್‌ ಕೂಡಾ ವರ್ಕೌಟ್‌ ಆಗಿಲ್ಲ ಅಂದಾಗ ಬಾಲ್‌ ಟ್ಯಾಂಪರಿಂಗ್‌ ಮಾಡುವುದಕ್ಕೂ ಆಸೀಸ್‌ ಆಟಗಾರರು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಜಗತ್ತಿನ ಮುಂದಿರುವ ನಗ್ನ ಸತ್ಯ.

ಇದೆಲ್ಲದರ ನಡುವೆ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಭಾರತೀಯರನ್ನು ಹೇಗಾದರೂ ಮಾಡಿ ಔಟ್‌ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ಆಸೀಸ್‌ ಪಿಚ್‌ ಹಾಳು ಮಾಡಲು ಸಹ ಯತ್ನಿಸಿತು. ಸ್ಟೀವ್‌ ಸ್ಮಿತ್‌ ಕ್ರೀಸ್‌ ಬಳಿ ತಮ್ಮ ಶೂನಿಂದ ಪಿಚ್‌ ಮೇಲೆ ಉದ್ದೇಶಪೂರ್ವಕವಾಗಿ ಕೆರೆದು, ಸ್ಪಿನ್ನರ್‌ ನೇಥನ್‌ ಲಯನ್‌ಗೆ ಅನುಕೂಲ ಮಾಡಿಕೊಡಲು ಯತ್ನಿಸಿದರು. ಅವರ ಈ ಯತ್ನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಅನೇಕರಿಂದ ಸ್ಮಿತ್‌ ಟೀಕೆಗೆ ಗುರಿಯಾಗಿದ್ದಾರೆ.

ಇನ್ನು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್‌ ವಾರ್ನರ್‌ ಹಾಗೂ ಕ್ಯಾಮರೋನ್‌ ಬೆನ್‌ಕ್ರಾಫ್ಟ್‌ ಬಾಲ್‌ ಟ್ಯಾಂಪರಿಂಗ್‌ ಮಾಡಿ ಸಿಕ್ಕಿಬಿದ್ದು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು. ಸ್ಮಿತ್ ಹಾಗೂ ವಾರ್ನರ್‌ 12 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು. ಇನ್ನು ಬೆನ್‌ಕ್ರಾಫ್ಟ್‌ ಅವರನ್ನು 9 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿಡಲಾಗಿತ್ತು. ನಿಷೇಧ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಸ್ಟೀವ್‌ ಸ್ಮಿತ್ ಮಾಧ್ಯಮದೆದುರೇ ಬಿಕ್ಕಿಬಿಕ್ಕಿ ಅತ್ತಿದ್ದರು. ಆದರೆ ಇದೀಗ ಪಂತ್‌ ಮಾರ್ಕ್‌ ಮಾಡಿದ್ದ ಗಾರ್ಡ್‌ ಅಳಿಸಿ ಹಾಕುವ ಮೂಲಕ ತಮ್ಮ ಹಳೆ ಚಾಳಿ ಮುಂದುವರೆಸಿದ್ದಾರೆ.

ಸಿಡ್ನಿ ಟೆಸ್ಟ್; ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆಗೆ ದಂಡ!

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಗೆಲ್ಲಲು 407 ರನ್‌ಗಳ ಗುರಿ ನೀಡಿತ್ತು. ರಿಷಭ್ ಪಂತ್(97) ಶತಕ ವಂಚಿತ ಬ್ಯಾಟಿಂಗ್‌ ಹಾಗೂ ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿ 6ನೇ ವಿಕೆಟ್‌ಗೆ ಮುರಿಯದ ಅರ್ಧಶತಕದ ಜತೆಯಾಟವಾಡುವ ಮೂಲಕ ಪಂದ್ಯ ರೋಚಕವಾಗಿ ಡ್ರಾ ಮಾಡುವಲ್ಲಿ ಯಶಸ್ವಿಯಾದರು.