ಕೇಪ್‌ಟೌನ್(ನ.30): ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ ಆಡಿದ ಬಳಿಕ ನನ್ನ ಪ್ರದರ್ಶನ ಮತ್ತೊಂದು ಸ್ತರಕ್ಕೆ ಏರಿದೆ ಎಂದು ಇಂಗ್ಲೆಂಡ್ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ಹೇಳಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಯಾಮ್ ಕರ್ರನ್ ಕೆಲವು ಸ್ಮರಣೀಯ ಇನಿಂಗ್ಸ್ ಆಡಿದ್ದರು.

ಸ್ಯಾಮ್ ಕರ್ರನ್ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಮೊದಲ ಪಂದ್ಯದಲ್ಲೇ 3 ವಿಕೆಟ್‌ ಪಡೆದು ಗಮನ ಸೆಳೆದಿದ್ದಾರೆ. ಸ್ಟಾರ್ ಆಟಗಾರರೇ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿರಬೇಕಾದರೆ, ಕರ್ರನ್ ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ರನ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಡಿದ್ದು ತಮಗೆ ಅನುಕೂಲವಾಗಿದೆ ಎಂದು ಕರ್ರನ್ ಹೇಳಿದ್ದಾರೆ.

ನಾನು ಐಪಿಎಲ್ ಟೂರ್ನಿಯನ್ನು ಚೆನ್ನಾಗಿ ಆನಂದಿಸಿದೆ. ಐಪಿಎಲ್‌ ವೇಳೆ ಕಲಿತ ಪಾಠ ನನ್ನನ್ನು ಮತ್ತೊಂದು ಸ್ತರಕ್ಕೇರುವಂತೆ ಮಾಡಿದೆ. ಚೆನ್ನೈ ತಂಡದ ಕೋಚ್‌ಗಳಿಂದಲೂ ಸಾಕಷ್ಟು ಕಲಿತಿದ್ದೇನೆ. ನಾನು ಚೆನ್ನೈ ತಂಡ ಕೂಡಿಕೊಂಡ ಮೇಲೆ ಸಾಕಷ್ಟು ಕಲಿತಿದ್ದೇನೆ ಹಾಗೆಯೇ ನನ್ನ ಪ್ರದರ್ಶನವನ್ನು ಮತ್ತಷ್ಟು ಸುಧಾರಿಸಿಕೊಳ್ಳುವತ್ತ ಪ್ರಯತ್ನ ಪಡುತ್ತೇನೆ ಎಂದು ಕರ್ರನ್ ಹೇಳಿದ್ದಾರೆ.

14 ತಿಂಗಳ ಬಳಿಕ ಹಾರ್ದಿಕ್ ಪಾಂಡ್ಯ ಬೌಲಿಂಗ್; ಟೀಂ ಇಂಡಿಯಾಗೆ ಸಿಕ್ತು ಹೊಸ ಅಸ್ತ್ರ

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಯಾಮ್ ಕರ್ರನ್ 13 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿ 131.91ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಸ್ಯಾಮ್ ಕರ್ರನ್ ಕೆಚ್ಚೆದೆಯ ಪ್ರದರ್ಶನದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೇರಲು ವಿಫಲವಾಗಿತ್ತು. 14 ಪಂದ್ಯಗಳ ಪೈಕಿ ಧೋನಿ ಪಡೆ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವಿನ ಸಿಹಿ ಕಂಡಿತ್ತು.