Asianet Suvarna News Asianet Suvarna News

6ನೇ ತಂಡವಾಗಿ ಏಷ್ಯಾಕಪ್ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟ ಹಾಂಕಾಂಗ್..!

ಏಷ್ಯಾಕಪ್‌ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೇರಿದ ಹಾಂಕಾಂಗ್
ಯುಎಇ ತಂಡವನ್ನು ಮಣಿಸಿ ಪ್ರಧಾನ ಸುತ್ತು ಪ್ರವೇಶಿಸಿದ ಹಾಂಕಾಂಗ್
ಭಾರತ ಹಾಗೂ ಪಾಕಿಸ್ತಾನದ ಜತೆ ಕಾದಾಡಲಿರವ ಹಾಂಕಾಂಗ್

Hong Kong Cricket Team triumph against UAE to join India and Pakistan in the Asia Cup kvn
Author
First Published Aug 25, 2022, 6:09 PM IST

ಒಮಾನ್(ಆ.25): ಮುಂಬರುವ 15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 6ನೇ ತಂಡವಾಗಿ ಹಾಂಕಾಂಗ್ ತಂಡವು ಪ್ರಧಾನ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡವನ್ನು ಮಣಿಸುವ ಮೂಲಕ ಹಾಂಕಾಂಗ್ ತಂಡವು, ಏಷ್ಯಾಕಪ್ ಅರ್ಹತಾ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ಹಾಂಕಾಂಗ್ ತಂಡವು, ಏಷ್ಯಾಕಪ್ ಟೂರ್ನಿಯಲ್ಲಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ದ ಕಾದಾಡಲಿದೆ. 

ಮೇಲ್ನೋಟಕ್ಕೆ ಹಾಂಕಾಂಗ್ ತಂಡವು, ಏಷ್ಯಾದ ಎರಡು ಬಲಿಷ್ಠ ಕ್ರಿಕೆಟ್ ತಂಡಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಮಣಿಸಿ ಸೂಪರ್ 4 ಹಂತಕ್ಕೇರುವುದು ಅನುಮಾನ ಎನಿಸಿದೆ. ಹೀಗಿದ್ದೂ ಪವಾಡ ನಡೆದರಷ್ಟೇ ಹಾಂಕಾಂಗ್ ತಂಡವು ಸೂಪರ್ 4 ಹಂತಕ್ಕೇರಲು ಸಾಧ್ಯವಾಗಬಹುದು. ಏಷ್ಯಾಕಪ್ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿರುವುದರಿಂದ ಹಾಂಕಾಂಗ್ ತಂಡದ ಆಟಗಾರರಿಗೆ ವಿಶ್ವದ ಅತ್ಯುತ್ತಮ ಆಟಗಾರರೆದುರು ಕಾದಾಟ ನಡೆಸಲು ಅವಕಾಶ ಸಿಗಲಿದೆ. ಹಾಂಕಾಂಗ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಆಗಸ್ಟ್ 31ರಂದು ನಡೆದರೇ, ಸೆಪ್ಟೆಂಬರ್ 02ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಕಾದಾಡಲಿದೆ.

Asia Cup 2022 ಬಾಬರ್ ಅಜಂ ಬಳಿಕ ಪಾಕ್ ಲೆಜೆಂಡ್ ಮೊಹಮ್ಮದ್ ಯೂಸುಫ್‌ ಮಾತಾಡಿಸಿದ ವಿರಾಟ್ ಕೊಹ್ಲಿ..!

ಇನ್ನು ಫೈನಲ್ ಅರ್ಹತಾ ಸುತ್ತಿನ ಪಂದ್ಯದ ಬಗ್ಗೆ ಹೇಳುವುದಾದರೇ, ಯುಎಇ ತಂಡವನ್ನು ಕೇವಲ 147 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಹಾಂಕಾಂಗ್ ತಂಡವು ಯಶಸ್ವಿಯಾಯಿತು. ಅನುಭವಿ ಸ್ಪಿನ್ನರ್ ಇಶಾನ್‌ ಖಾನ್ ಕೇವಲ 24 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಯುಎಇ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 3 ಪಂದ್ಯಗಳ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಇಶಾನ್ ಖಾನ್ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹಾಂಕಾಂಗ್ ತಂಡಕ್ಕೆ ಆರಂಭಿಕರಿಬ್ಬರು 85 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿ ಕೊಟ್ಟರು. ಅಂತಿಮವಾಗಿ ಯುಎಇ ಎದುರು ಹಾಂಕಾಂಗ್ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಏಷ್ಯಾಕಪ್ ಪ್ರಧಾನ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳುತ್ತಿದ್ದು, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ನೇರ ಅರ್ಹತೆಯನ್ನು ಪಡೆದರೇ, ಹಾಂಕಾಂಗ್ ತಂಡವು ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು, ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದೆ.

Follow Us:
Download App:
  • android
  • ios