ಹಿಮಾಚಲ ಪ್ರದೇಶ ಯುವ ವೇಗಿ ಸಿದ್ಧಾರ್ಥ್ ಶರ್ಮಾ ನಿಧನ..! ಆಘಾತ ವ್ಯಕ್ತಪಡಿಸಿದ ರವಿಚಂದ್ರನ್ ಅಶ್ವಿನ್
ಹಿಮಾಚಲ ಪ್ರದೇಶದ ಯುವ ವೇಗಿ ಸಿದ್ದಾರ್ಥ್ ಶರ್ಮಾ ನಿಧನ
ಕೇವಲ 28 ವರ್ಷಕ್ಕೆ ಕೊನೆಯುಸಿರೆಳೆದ ಯುವ ವೇಗಿ
ಹಿಮಾಚಲ ಪ್ರದೇಶ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಯುವ ವೇಗಿ
ಧರ್ಮಶಾಲಾ(ಜ.14): ಹಿಮಾಚಲ ಪ್ರದೇಶ ರಣಜಿ ತಂಡದ ಯುವ ವೇಗದ ಬೌಲರ್ ಸಿದ್ಧಾರ್ಥ್ ಶರ್ಮಾ ಗುರುವಾರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ತಂಡದ ಜೊತೆ ಗುಜರಾತ್‌ಗೆ ಪ್ರಯಾಣಿಸಿದ್ದ 28 ವರ್ಷದ ಸಿದ್ಧಾರ್ಥ್ ಕಳೆದೆರಡು ವಾರಗಳಿಂದ ವಡೋದರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
2021-22ರ ವಿಜಯ್ ಹಜಾರೆ ಟೂರ್ನಿಯ ಪ್ರಶಸ್ತಿ ವಿಜೇತ ಹಿಮಾಚಲ ತಂಡದಲ್ಲಿದ್ದ ಸಿದ್ಧಾರ್ಥ್, ಕಳೆದ ಡಿಸೆಂಬರ್‌ನಲ್ಲಿ ಬೆಂಗಾಲ್ ವಿರುದ್ಧ ಕೊನೆ ರಣಜಿ ಪಂದ್ಯವಾಡಿದ್ದರು. ಪಂದ್ಯದಲ್ಲಿ ಒಟ್ಟು 7 ವಿಕೆಟ್ ಕಬಳಿಸಿದ್ದರು.
ಸಿದ್ದಾರ್ಥ್ ಸಾವಿನ ಬಗ್ಗೆ ಅಶ್ವಿನ್ ಆಘಾತ:
ಹೌದು, ಹಿಮಾಚಲ ಪ್ರದೇಶದ ಪ್ರತಿಭಾನ್ವಿತ ವೇಗಿಯ ನಿಧನಕ್ಕೆ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅಶ್ವಿನ್, "ಇದು ನಿಜಕ್ಕೂ ಆತಂಕ ಮೂಡಿಸುತ್ತದೆ. ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಿಯಮಿತವಾಗಿ ಎಲ್ಲಾ ವಯೋಮಿತಿಯ ಆಟಗಾರರ ಆರೋಗ್ಯ ತಪಾಸಣೆ ನಡೆಸುತ್ತಿದೆ ಎನ್ನುವ ವಿಶ್ವಾಸವಿದೆ. ಈಗಂತೂ ಸಾಕಷ್ಟು ಕ್ರಿಕೆಟ್ ಪಂದ್ಯಗಳು ನಡೆಯುತ್ತಿದೆ. ಹೀಗಾಗಿ ಕ್ರಿಕೆಟಿಗರು ವರ್ಷದುದ್ದಕ್ಕೂ ಆಟಗಾರರು ಫಿಟ್ ಆಗಿರಬೇಕಾಗುತ್ತದೆ. ಸಿದ್ದಾರ್ಥ್ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ" ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಪಂತ್ ಆರೋಗ್ಯ ಚೇತರಿಕೆ: ಎದ್ದು ಓಡಾಡಲು ಪ್ರಯತ್ನ
ಮುಂಬೈ: ಕಳೆದ ತಿಂಗಳು ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತದ ಕ್ರಿಕೆಟಿಗ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು, ಎದ್ದು ನಡೆದಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಆಸ್ಪತ್ರೆಯಲ್ಲಿರುವ ಪಂತ್ ಅಪಘಾತದ ಬಳಿಕ ಇದೇ ಮೊದಲ ಬಾರಿ ಸ್ವತಃ ಎದ್ದು ನಿಲ್ಲಲು ಪ್ರಯತ್ನಿಸಿದ್ದಾರೆ. ಆದರೆ ನಡೆದಾಡಲು ಸಾಧ್ಯವಾಗಿಲ್ಲ.
ಕಿವೀಸ್ ಎದುರಿನ ಟಿ20 ಸರಣಿಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿಲ್ಲ ಸ್ಥಾನ..!
ಇನ್ನು ಒಂದು ವಾರದ ಬಳಿಕ ಇತರರ ಸಹಾಯದಿಂದ ನಡೆದಾಡಬಹುದು ಎಂದು ವೈದ್ಯರು ಭರವಸೆ ವ್ಯಕ್ತಪಡಿಸಿದ್ದು, ಕೆಲ ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಪುನಶ್ಚೇತನ ಹಾಗೂ ಅಭ್ಯಾಸದ ಬಳಿಕವೇ ರಿಷಭ್ ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ.
ಜ.25ಕ್ಕೆ ಮಹಿಳಾ ಐಪಿಎಲ್ ತಂಡಗಳ ಹೆಸರು ಘೋಷಣೆ
ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟಿ20 ಟೂರ್ನಿಯಲ್ಲಿ ಆಡಲಿರುವ 5 ತಂಡಗಳ ಹೆಸರನ್ನು ಬಿಸಿಸಿಐ ಜ.25ರಂದು ಘೋಷಿಸುವ ಸಾಧ್ಯತೆ ಇದೆ. ಬಿಸಿಸಿಐ 10 ನಗರಗಳನ್ನು ಪಟ್ಟಿ ಮಾಡಿದ್ದು ಈ ಪೈಕಿ 5 ನಗರಗಳನ್ನು ತಂಡಗಳು ಪ್ರತಿನಿಧಿಸಲಿವೆ. ಈಗಾಗಲೇ ತಂಡ ಖರೀದಿಗೆ ಆಸಕ್ತಿ ತೋರಿರುವ ವ್ಯಕ್ತಿ ಅಥವಾ ಸಂಸ್ಥೆಗಳು ಮುಚ್ಚಿದ ಲಕೋಟೆಯಲ್ಲಿ ಬಿಡ್ ಮಾಡುವ ಮೊತ್ತವನ್ನು ಸೂಚಿಸಿವೆ ಎನ್ನಲಾಗಿದೆ.
ಜನವರಿ 25ರಂದು ಲಕೋಟೆಗಳನ್ನು ಬಿಸಿಸಿಐ ತೆರೆಯಲಿದ್ದು, ಗರಿಷ್ಠ ಬಿಡ್ ಸಲ್ಲಿಸಿರುವವರಿಗೆ ಮೊದಲ ತಂಡ ಸಿಗಲಿದೆ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ತಮ್ಮಿಷ್ಟದ ನಗರವನ್ನು ಸೂಚಿಸಬಹುದಾಗಿದೆ. ಗರಿಷ್ಠ ಮೊತ್ತ ಸೂಚಿಸಿದ ಅಗ್ರ 5 ಮಂದಿಗೆ ತಂಡಗಳ ಮಾಲಿಕತ್ವ ಸಿಗಲಿದೆ. 10 ನಗರಗಳ ಪೈಕಿ ಬೆಂಗಳೂರು ಕೂಡಾ ಒಂದಾಗಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಆಸಕ್ತಿ!
ಪುರುಷರ ಐಪಿಎಲ್‌ನಲ್ಲಿ ತಂಡ ಹೊಂದುವ ಅವಕಾಶ ಕೈತಪ್ಪಿದ ಬಳಿಕ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಪ್ರತಿಷ್ಠಿತ ತಂಡವಾದ ಮ್ಯಾಂಚೆಸ್ಟರ್ ಯುನೈಟೆಡ್ ಮಹಿಳಾ ಐಪಿಎಲ್‌ನಲ್ಲಿ ತಂಡ ಖರೀದಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ. ಮಾಲಿಕ ಆವರಮ್ ಗ್ಲೇಜರ್ ದೊಡ್ಡ ಮೊತ್ತಕ್ಕೆ ಬಿಡ್ ಸಲ್ಲಿಸಿದ್ದಾರೆ ಎನ್ನಲಾಗಿದೆ.