ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶೀಂ ಆಮ್ಲಾ ಕ್ರಿಕೆಟ್ ಜಗತ್ತಿನ ಮೂವರು ಸರ್ವಶ್ರೇಷ್ಠ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ವಿವಿಯನ್ ರಿಚರ್ಡ್ಸ್ ಆಯ್ಕೆಯಾಗಿದ್ದಾರೆ. ಆಶ್ಚರ್ಯಕರವಾಗಿ ಸಚಿನ್ ತೆಂಡುಲ್ಕರ್ ಪಟ್ಟಿಯಲ್ಲಿಲ್ಲ.

ಬೆಂಗಳೂರು: ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ದಿಗ್ಗಜ ಬ್ಯಾಟರ್‌ಗಳನ್ನು ನಾವು ಕಂಡಿದ್ದೇವೆ. ಜಗತ್ತಿನಾದ್ಯಂತ ಆಯಾ ಕಾಲಘಟ್ಟಗಳಲ್ಲಿ ಹಲವು ಸೂಪರ್ ಕ್ರಿಕೆಟಿಗರು ಮಿಂಚಿ ಮರೆಯಾಗಿದ್ದಾರೆ. ಈ ಪೈಕಿ ಕೆಲವು ಕ್ರಿಕೆಟಿಗರು ರನ್ ರಾಶಿಯನ್ನೇ ಗುಡ್ದೆಹಾಕಿದ್ದಾರೆ. ವಿಶ್ವಶ್ರೇಷ್ಠ ದಿಗ್ಗಜ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇನ್ನು ಇದೆಲ್ಲದರ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶೀಂ ಆಮ್ಲಾ, ಕ್ರಿಕೆಟ್‌ ಜಗತ್ತಿನ ಸರ್ವಶ್ರೆಷ್ಠ ಮೂವರು ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಹಾಶೀಂ ಆಮ್ಲಾ ಆಯ್ಕೆ ಮಾಡಿದ ಮೂವರು ದಿಗ್ಗಜ ಆಟಗಾರರ ಪೈಕಿ ಓರ್ವ ಭಾರತೀಯ ಸ್ಥಾನ ಪಡೆದಿದ್ದಾರೆ. ಆದರೆ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಅವಕಾಶ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಸ್ಟಾರ್ ಸ್ಪೋರ್ಟ್‌ ಜತೆಗಿನ ಸಂವಾದದಲ್ಲಿ ಹಾಶೀಂ ಆಮ್ಲಾ ಕ್ರಿಕೆಟ್ ಜಗತ್ತಿನ ಮೂವರು ಸರ್ವಶ್ರೇಷ್ಠ ಬ್ಯಾಟರ್‌ಗಳು ಯಾರು ಎನ್ನುವುದರ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಶೀಂ ಆಮ್ಲಾ ಆಯ್ಕೆ ಮಾಡಿದ ಮೂವರು ಬ್ಯಾಟರ್‌ಗಳ ಪೈಕಿ ಓರ್ವ ಭಾರತೀಯ ಬ್ಯಾಟರ್ ಅನ್ನು ಹೆಸರಿಸಿದ್ದಾರೆ. ಹೌದು, ಹಾಶೀಂ ಆಮ್ಲಾ ಆಯ್ಕೆ ಮಾಡಿದ ಭಾರತೀಯ ಬೇರ್ಯಾರು ಅಲ್ಲ, ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ. ಇನ್ನು ಇದಷ್ಟೇ ಅಲ್ಲದೇ ಹಾಶೀಂ ಆಮ್ಲಾ. ಹರಿಣಗಳ ಪಡೆಯ ಮಾಜಿ ಕ್ರಿಕೆಟಿಗ, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಬ್ಯಾಟರ್ ರೂಪದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್‌ ಅವರನ್ನು ಹಾಶೀಂ ಆಮ್ಲಾ ಆಯ್ಕೆ ಮಾಡಿದ್ದಾರೆ. ಈ ಮೂವರು ಕ್ರಿಕೆಟಿಗರು ತಮ್ಮ ಅಸಾಧಾರಣ ಬ್ಯಾಟಿಂಗ್ ಪ್ರತಿಭೆಯ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Scroll to load tweet…

ಸಾಮಾನ್ಯವಾಗಿ ಯಾವುದೇ ಬ್ಯಾಟಿಂಗ್ ದಿಗ್ಗಜರ ಹೆಸರು ಮುನ್ನಲೆಗೆ ಬಂದರೆ ಅಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೆಸರು ಕೇಳಿ ಬರುತ್ತದೆ. ಆದರೆ ಹಾಶೀಂ ಆಮ್ಲಾ, ಮಾಸ್ಟರ್ ಬ್ಲಾಸ್ಟರ್ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಸಚಿನ್ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯ, ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಇಂದಿಗೂ ಅವರ ಹೆಸರಿನಲ್ಲಿ ಹತ್ತು ಹಲವು ದಾಖಲೆಗಳು ಅಚ್ಚಳಿಯದೇ ಉಳಿದಿವೆ.

ಇನ್ನು ಹಾಶೀಂ ಆಮ್ಲಾ ಅವರ ಬಗ್ಗೆ ಹೇಳುವುದಾದರೇ, 2004ರಲ್ಲಿ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹಾಶೀಂ ಆಮ್ಲಾ, ಹರಿಣಗಳ ಪಡೆ ಕಂಡ ದಿಗ್ಗಜ ಬ್ಯಾಟರ್‌ಗಳಾಗಿ ಬೆಳೆದು ನಿಂತರು. ದಕ್ಷಿಣ ಆಫ್ರಿಕಾ ಪರ 124 ಟೆಸ್ಟ್‌ ಪಂದ್ಯಗಳನ್ನಾಡಿ 28 ಶತಕ ಹಾಗೂ 41 ಅರ್ಧಶತಕ ಸಹಿತ 9282 ರನ್ ಸಿಡಿಸಿದ್ದಾರೆ. ಇನ್ನು ಹರಿಣಗಳ ಪರ 181 ಏಕದಿನ ಪಂದ್ಯಗಳನ್ನಾಡಿರುವ ಆಮ್ಲಾ, 27 ಶತಕ ಹಾಗೂ 39 ಅರ್ಧಶತಕ ಸಹಿತ 49.46ರ ಬ್ಯಾಟಿಂಗ್ ಸರಾಸರಿಯಲ್ಲಿ 8113 ರನ್ ಬಾರಿಸಿದ್ದರು. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಆಮ್ಲಾ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾ ಪರ 44 ಟಿ20 ಪಂದ್ಯಗಳನ್ನಾಡಿ 8 ಅರ್ಧಶತಕ ಸಹಿತ 1277 ರನ್ ಸಿಡಿಸಿದ್ದಾರೆ. ಹಾಶೀಂ ಆಮ್ಲಾ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಹಾಶೀಂ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 18,672 ರನ್ ಸಿಡಿಸಿದ್ದಾರೆ.