'ಪ್ರತಿ ಬಾಲ್‌ಗೂ....': ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ..!
ಐಸಿಸಿ ಇಂದು ಬೆಳಗ್ಗೆ ಈ ವಿಚಾರವನ್ನು ಖಚಿತಪಡಿಸಿದ್ದು, ಇನ್ನುಳಿದ ವಿಶ್ವಕಪ್ ಪಂದ್ಯಗಳಿಂದ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದು, ಅವರ ಬದಲಿಗೆ ವೇಗಿ ಪ್ರಸಿದ್ಧ್ ಕೃಷ್ಣ ಅವರು ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಂಡಿದ್ದಾರೆ.
ಬೆಂಗಳೂರು(ನ.04): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಅಕ್ಟೋಬರ್ 19ರಂದು ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಜಾರಿಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಬಂದು ಪ್ರಾಥಮಿಕ ಆರೋಗ್ಯ ವಿಚಾರಿಸಿದ್ದರು. ಆದರೆ ನೋವು ತೀವ್ರಗೊಂಡ ಬೆನ್ನಲ್ಲೇ ಕುಂಟುತ್ತಲೇ ಮೈದಾನ ತೊರೆದಿದ್ದರು. ಇದಾದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪಾಂಡ್ಯ, ಇಂಗ್ಲೆಂಡ್ ಎದುರಿನ ಪಂದ್ಯದ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಪಾಂಡ್ಯ ಚೇತರಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
Breaking: ಟೀಂ ಇಂಡಿಯಾಗೆ ಅತಿದೊಡ್ಡ ಶಾಕ್: ಸ್ಟಾರ್ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..!
ಈ ಕುರಿತಂತೆ ಐಸಿಸಿ ಇಂದು ಬೆಳಗ್ಗೆ ಈ ವಿಚಾರವನ್ನು ಖಚಿತಪಡಿಸಿದ್ದು, ಇನ್ನುಳಿದ ವಿಶ್ವಕಪ್ ಪಂದ್ಯಗಳಿಂದ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದು, ಅವರ ಬದಲಿಗೆ ವೇಗಿ ಪ್ರಸಿದ್ಧ್ ಕೃಷ್ಣ ಅವರು ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಂಡಿದ್ದಾರೆ.
ಇನ್ನು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಎಕ್ಸ್(ಟ್ವೀಟ್) ಮಾಡಿರುವ ಹಾರ್ದಿಕ್ ಪಾಂಡ್ಯ, "ನಾವು ವಿಶ್ವಕಪ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದೇನೆ ಎನ್ನುವುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ನಾನು ಯಾವಾಗಲೂ ತಂಡದ ಜತೆಗೆ ಇರುತ್ತೇನೆ. ಪ್ರತಿ ಪಂದ್ಯದಲ್ಲೂ, ಪ್ರತಿ ಬಾಲ್‌ಗೂ ಭಾರತ ತಂಡದ ಪರ ಚಿಯರ್ ಮಾಡುತ್ತೇನೆ. ನೀವು ನನ್ನ ಆರೋಗ್ಯ ಚೇತರಿಕೆಯ ಕುರಿತಂತೆ ನೀಡಿದ ಹಾರೈಕೆ, ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು. ಈ ತಂಡವು ವಿಶೇಷವಾದದ್ದಾಗಿದೆ. ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ನಾವೆಲ್ಲರೂ ಮಾಡಲಿದ್ದೇವೆ. ಪ್ರೀತಿಯಿರಲಿ, ನಿಮ್ಮವ ಹಾರ್ದಿಕ್ ಪಾಂಡ್ಯ" ಎಂದು ಬರೆದುಕೊಂಡಿದ್ದಾರೆ.
ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು; ಆಟಗಾರರ ರೀಟೈನ್‌ಗೆ ಡೇಟ್ ಫಿಕ್ಸ್
ಗಾಯದ ಸಮಸ್ಯೆಯ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದ ಹಾರ್ದಿಕ್ ಪಾಂಡ್ಯ, ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದ ಪಾಂಡ್ಯ ಅನುಪಸ್ಥಿತಿ ಕಾಡದೇ ಇರುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮುಂದಿದೆ.