* ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಐಪಿಎಲ್ ಚಾಂಪಿಯನ್* ರಾಜಸ್ಥಾನ ರಾಯಲ್ಸ್ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದ ಗುಜರಾತ್ ಟೈಟಾನ್ಸ್* ಹಾರ್ದಿಕ್ ಪಾಂಡ್ಯ ಟ್ರೋಫಿ ಗೆಲ್ಲುತ್ತಿದ್ದಂತೆ ಬಿಗಿದಪ್ಪಿ ಮುದ್ದಾಡಿದ ಪತ್ನಿ ನತಾಶಾ ಸ್ಟಾಂಕೋವಿಚ್
ಅಹಮದಾಬಾದ್(ಮೇ.30): 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಾಯಕನಾದ ಮೊದಲ ಪ್ರಯತ್ನದಲ್ಲೇ ಹಾರ್ದಿಕ್ ಪಾಂಡ್ಯ (Hardik Pandya) ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾಗಿ ಪಾಂಡ್ಯ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಪತ್ನಿ ನತಾಶಾ ಸ್ಟಾಂಕೋವಿಚ್ (Natasa Stankovic) ಮೈದಾನಕ್ಕೆ ಬಂದು ಬಿಗಿದಪ್ಪಿ ಸಂಭ್ರಮಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ವರ್ಣರಂಜಿತ ಐಪಿಎಲ್ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 130 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಆಲ್ರೌಂಡ್ ಪ್ರದರ್ಶನದ ಜತೆಗೆ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇನ್ನು ಫೈನಲ್‌ನಲ್ಲಿ ಶುಭ್‌ಮನ್ ಗಿಲ್ ಸಿಕ್ಸರ್ ಸಿಡಿಸುತ್ತಿದ್ದಂತೆಯೇ ಗುಜರಾತ್ ಟೈಟಾನ್ಸ್ ಪಾಳಯದಲ್ಲಿ ಸಂಭ್ರಮದ ಅಲೆ ಕಟ್ಟೆಯೊಡಿಯಿತು. ಈ ವೇಳೆ ಸಂತೋಷದಿಂದ ಮೈದಾನಕ್ಕಿಳಿದ ನತಾಶಾ ಸ್ಟಾಂಕೋವಿಚ್ ಪತಿ ಹಾರ್ದಿಕ್ ಪಾಂಡ್ಯರನ್ನು ತಮ್ಮ ತೋಳ ತೆಕ್ಕೆಯಲ್ಲಿ ಆಲಂಗಿಸಿಕೊಂಡರು. ಇಬ್ಬರೂ ಒಬ್ಬರಿಗೊಬ್ಬರನ್ನು ಅಭಿನಂದಿಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮುಂದೆ ಬೆಟ್ಟದಷ್ಟು ಸವಾಲುಗಳಿದ್ದವು. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯರನ್ನು ರೀಟೈನ್ ಮಾಡಿಕೊಂಡಿರಲಿಲ್ಲ. ಇನ್ನು ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೂಡಾ ಹಾರ್ದಿಕ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವುದೇ ಅನುಮಾನ ಎನ್ನುವಂತಹ ಮಾತುಗಳು ಕೇಳಿಬರಲಾರಂಭಿಸಿದ್ದವು. ಕಳೆದ ಟಿ20 ವಿಶ್ವಕಪ್ ಬಳಿಕ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಆಡಿರಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಜಗತ್ತಿನ ಮುಂದೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಒತ್ತಡಕ್ಕೆ ಸಿಲುಕಿದ್ದರು. 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲದೇ ಒಳ್ಳೆಯ ಆಲ್ರೌಂಡರ್ ಆಗಿಯೂ ತಂಡಕ್ಕೆ ಆಸರೆಯಾಗುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.
IPL Awards 2022: ಉಮ್ರಾನ್ ಮಲಿಕ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?
ಐಪಿಎಲ್‌ನಲ್ಲಿ ಭರ್ಜರಿ ಆಲ್ರೌಂಡ್ ಆಟ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ:
ಹಾರ್ದಿಕ್ ಪಾಂಡ್ಯ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಾನೆಷ್ಟು ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಐಪಿಎಲ್ ಟೂರ್ನಿಯುದ್ದಕ್ಕೂ ನಾಯಕನ ಆಟ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಕೇವಲ 15 ಪಂದ್ಯಗಳಲ್ಲಿ 44ರ ಬ್ಯಾಟಿಂಗ್ ಸರಾಸರಿಯಲ್ಲಿ 487 ರನ್ ಸಿಡಿಸುವ ಮೂಲಕ ಗುಜರಾತ್ ಟೈಟಾನ್ಸ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿದರು. ಇನ್ನು ಬೌಲಿಂಗ್‌ನಲ್ಲಿ 10 ಇನಿಂಗ್ಸ್‌ಗಳಲ್ಲಿ 8 ವಿಕೆಟ್ ಪಡೆದು ಗಮನ ಸೆಳೆದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 17 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
