Asianet Suvarna News Asianet Suvarna News

ಲಿಟ್ಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌ಗೆ 72ರ ಹುಟ್ಟುಹಬ್ಬದ ಸಂಭ್ರಮ

* ಕ್ರಿಕೆಟ್ ದಿಗ್ಗಜ ಸುನಿಲ್‌ ಗವಾಸ್ಕರ್‌ಗಿಂದು 72ನೇ ಹುಟ್ಟುಹಬ್ಬದ ಸಂಭ್ರಮ

* ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂತು ಶುಭಾಶಯಗಳ ಮಹಾಪೂರ

* ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಸನ್ನಿ

Happy Birthday Sunil Gavaskar Indian Cricket Legend turn 72 today kvn
Author
Bengaluru, First Published Jul 10, 2021, 12:50 PM IST

ಜುಲೈ(ಜು.10): ಜುಲೈ ತಿಂಗಳು ಮೂವರು ದಿಗ್ಗಜ ಕ್ರಿಕೆಟಿಗರ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದೆ. ಜುಲೈ 7ರಂದು ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡರೆ, ಜುಲೈ 08ರಂದು ಸೌರವ್‌ ಗಂಗೂಲಿ ಸರಳವಾಗಿ ಬರ್ತ್‌ ಡೇ ಆಚರಿಸಿಕೊಂಡರು. ಇದೀಗ ಜುಲೈ 10ರಂದು ಭಾರತ ಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗ, ಲಿಟ್ಲ್‌ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಇಂದು 72ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ದಿಗ್ಗಜ ಕ್ರಿಕೆಟಿಗನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರಲಾರಂಭಿಸಿದೆ.

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ, 233  ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ 13,214 ರನ್‌ ಬಾರಿಸಿರುವ, ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ ಸುನಿಲ್‌ ಗವಾಸ್ಕರ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ದಿಗ್ಗಜ ಕ್ರಿಕೆಟಿಗರಾದ ಸರ್ ಡಾನ್ ಬ್ರಾಡ್ಮನ್‌, ಅಲನ್ ಬಾರ್ಡರ್, ಬ್ರಿಯಾನ್ ಲಾರಾ, ಸಚಿನ್ ತೆಂಡುಲ್ಕರ್ ಅವರಂತೆ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸುನಿಲ್‌ ಗವಾಸ್ಕರ್ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ. ಭಾರತ ಪರ ಒಟ್ಟು 125 ಟೆಸ್ಟ್ ಪಂದ್ಯಗಳನ್ನಾಡಿ 51.12ರ ಬ್ಯಾಟಿಂಗ್ ಸರಾಸರಿಯಂತೆ 10,122 ರನ್‌ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ 34 ಶತಕಗಳನ್ನು ಬಾರಿಸಿದ್ದರು. ಈ ದಾಖಲೆ 2 ದಶಕಗಳ ಕಾಲ ಗವಾಸ್ಕರ್ ಹೆಸರಿನಲ್ಲಿಯೇ ಇತ್ತು. ಸಚಿನ್ ತೆಂಡುಲ್ಕರ್ ಈ ದಾಖಲೆಯನ್ನು ಬ್ರೇಕ್‌ ಮಾಡಿದ್ದರು.

ಸೌರವ್ ಗಂಗೂಲಿಗೆ 49ರ ಸಂಭ್ರಮ; ಹರಿದು ಬಂತು ಅಭಿನಂದನೆಗಳ ಮಹಾಪೂರ

1971ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸುನಿಲ್ ಗವಾಸ್ಕರ್, ಚೊಚ್ಚಲ ಸರಣಿಯಲ್ಲೇ ಬಲಾಢ್ಯ ವೆಸ್ಟ್ ಇಂಡೀಸ್‌ ಎದುರು 774 ರನ್‌ ಚಚ್ಚಿದ್ದರು.  ಇದಾಗಿ 5 ದಶಕಗಳೇ ಕಳೆದರೂ ಚೊಚ್ಚಲ ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ಇಂದಿಗೂ ಗವಾಸ್ಕರ್ ಹೆಸರಿನಲ್ಲಿಯೇ ಇದೆ. ಆ ಸರಣಿಯಲ್ಲಿ ಗವಾಸ್ಕರ್ 4 ಶತಕ ಹಾಗೂ 3 ಅರ್ಧಶತಕ ಸಹಿತ 154.80 ಸರಾಸರಿಯಲ್ಲಿ ರನ್‌ ಗಳಿಸಿದ್ದರು.

1983ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಗವಾಸ್ಕರ್ ಕೂಡಾ ಒಬ್ಬರಾಗಿದ್ದರು. ಗವಾಸ್ಕರ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಏಕದಿನ ಕ್ರಿಕೆಟ್‌ನಲ್ಲಿ ಸಿಗಲಿಲ್ಲ. 1974ರಿಂದ 1987ರ ಅವಧಿಯಲ್ಲಿ ಭಾರತ ಪರ 120 ಏಕದಿನ ಪಂದ್ಯಗಳನ್ನಾಡಿದ್ದ ಗವಾಸ್ಕರ್ 3092 ರನ್‌ ಬಾರಿಸಿದ್ದರು. 

ಭಾರತದ ದಿಗ್ಗಜ ಕ್ರಿಕೆಟಿಗ ಗವಾಸ್ಕರ್‌ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು 2009ರಲ್ಲಿ ಗವಾಸ್ಕರ್ ಐಸಿಸಿ ಹಾಲ್ ಆಫ್‌ ಫೇಮ್‌ ಗೌರವಕ್ಕೂ ಭಾಜನರಾಗಿದ್ದರು. ಇದಾಗಿ ಮೂರು ವರ್ಷಗಳ ಬಳಿಕ ಗವಾಸ್ಕರ್ ಬಿಸಿಸಿಐನಿಂದ ಕೊಡಮಾಡಲಾಗುವ ಸಿ.ಕೆ.ನಾಯ್ಡು ಜೀವಮಾನದ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ವಾಸೀಂ ಜಾಫರ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು 'ಸನ್ನಿ' ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.  

Follow Us:
Download App:
  • android
  • ios