ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾಹಸಿಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದೆ.

ಗುವಾಹಟಿ (ನ.28): ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾಹಸಿಕ ಶತಕದ ಮುಂದೆ ಸಂಪೂರ್ಣವಾಗಿ ಭಾರತ ಶರಣಾಯಿತು. 222 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿದರೂ, 48 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ಗಳ ಅಬ್ಬರದ ಆಟದೊಂದಿಗೆ ಅಜೇಯ 104 ರನ್‌ ಬಾರಿಸಿದ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ತಂಡಕ್ಕೆ ಐದು ವಿಕೆಟ್‌ ಗೆಲುವಿಗೆ ಕಾರಣರಾದರು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸೀಸ್‌ ತಂಡ ಹಿನ್ನಡೆಯನ್ನು 1-2ಕ್ಕೆ ಇಳಿಸಿದೆ. ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಡಿಸೆಂಬರ್‌ 1 ರಂದು ನಡೆಯಲಿದೆ.ಬರ್ಸಾಪರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ರುತುರಾಜ್‌ ಗಾಯಕ್ವಾಡ್‌ (123 ರನ್‌, 57 ಎಸೆತ, 13 ಬೌಂಡರಿ, 7 ಸಿಕ್ಸರ್‌) ನೆರವಿನಿಂದ 3 ವಿಕೆಟ್‌ಗ 222 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಆರಂಭಿಕ ಹಿನ್ನಡೆಯ ಹೊರತಾಗಿಯೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (104*ರನ್‌, 48 ಎಸೆತ, 8 ಬೌಂಡರಿ, 8 ಸಿಕ್ಸರ್‌) ಅಬ್ಬರದ ಇನ್ನಿಂಗ್ಸ್‌ ನೆರವಿನಿಂದ 20 ಓವರ್‌ಗಳಲ್ಲಿ5 ವಿಕೆಟ್‌ಗೆ 225 ರನ್ ಬಾರಿಸಿ ಗೆಲುವು ಕಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 24 ರನ್‌ ಬಾರಿಸುವ ವೇಳೆಗೆ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ (6) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (0) ಡಗ್‌ಔಟ್‌ ಸೇರಿದ್ದರು. ಈ ಹಂತದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ (39ರನ್‌, 29 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹಾಗೂ ರುತುರಾಜ್‌ ಗಾಯಕ್ವಾಡ್‌ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು. 10.2 ಓವರ್‌ನಲ್ಲಿ 81 ರನ್‌ ಗಳಿಸಿದ್ದ ಸಮಯದಲ್ಲಿ ಸೂರ್ಯಕುಮಾರ್‌ ಕೂಡ ಔಟಾದರು. ಆ ಬಳಿಕ ತಿಲಕ್‌ ವರ್ಮ ಜೊತೆಗೂಡಿ ರುದ್ರತಾಂಡವ ನಡೆಸಿದ್ದ ರುತರಾಜ್‌ ಗಾಯಕ್ವಾಡ್‌ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಕೊನೆಯ 58 ಎಸೆತಗಳಲ್ಲಿ ತಿಲಕ್‌ ವರ್ಮ ಜೊತೆಗೂಡಿ 141 ರನ್‌ ಜೊತೆಯಾಟವಾಡಿದ್ದರು. ಇದರಲ್ಲಿ ತಿಲಕ್‌ ವರ್ಮ ಅವರ ಪಾಲು ಬರೀ 31 ರನ್‌ ಆಗಿತ್ತು.

ಪ್ರತಿಯಾಗಿ ಆಸೀಸ್‌ ತಂಡಕ್ಕೆ ಮೊದಲ ವಿಕೆಟ್‌ಗೆ ಆರೋನ್‌ ಹಾರ್ಡಿ (16) ಹಾಗೂ ಟ್ರಾವಿಸ್‌ ಹೆಡ್‌ (35 ರನ್‌ 18 ಎಸೆತ, 8 ಬೌಂಡರಿ) ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ 47 ರನ್‌ ಜೊತೆಯಾಟವಾಡಿ ಬೇರ್ಪಟ್ಟರು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 47 ರನ್‌ ಬಾರಿಸಿದ್ದ ಆಸೀಸ್‌, ಈ ಮೊತ್ತಕ್ಕೆ 21 ರನ್‌ ಸೇರಿಸುವ ವೇಳೆಗೆ 3 ವಿಕೆಟ್‌ ಕಳೆದುಕೊಂಡಿತ್ತು. ಇಬ್ಬರೂ ಆರಂಭಿಕರೊಂದಿಗೆ ಜೋಸ್ ಇಂಗ್ಲಿಸ್‌ (10) ಕೂಡ ನಿರ್ಗಮಿಸಿದ್ದರು.

ಧೋನಿ ನಂತರ CSK ಕ್ಯಾಪ್ಟನ್ ಯಾರು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

68 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಮ್ಯಾಕ್ಸ್‌ವೆಲ್‌ ಹಾಗೂ ಮಾರ್ಕಸ್‌ ಸ್ಟೋಯಿನಸ್‌ (17) ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಈ ಹಂತದಲ್ಲಿ ಬೆನ್ನುಬೆನ್ನಿಗೆ ಸ್ಟೋಯಿನಸ್‌ ಹಾಗೂ ಟಿಮ್‌ ಡೇವಿಡ್‌ ವಿಕೆಟ್‌ ಉರುಳಿದಾಗ ಆಸೀಸ್‌ ಅಪಾಯ ಕಂಡಿತ್ತು. ಆಗ ಮ್ಯಾಕ್ಸ್‌ವೆಲ್‌ಗೆ ಜೊತೆಯಾದ ನಾಯಕ ಮ್ಯಾಥ್ಯೂ ವೇಡ್‌ (28 ರನ್‌, 16 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮ್ಯಾಕ್‌ವೆಲ್‌ಗೆ ಜೊತೆಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಪಾನಿಷ್‌ ಓಪನ್‌ ಗಾಲ್ಫ್‌: ರಾಜ್ಯದ ಅದಿತಿ ಅಶೋಕ್‌ ಪ್ರಶಸ್ತಿ