Asianet Suvarna News Asianet Suvarna News

Ind vs SA: ಗುವಾಹಟಿಯಲ್ಲಿ ರಾಹುಲ್‌ ಸ್ಪೋಟಕ ಆಟ, ಸೂರ್ಯನ ವಿರಾಟ್‌ ರೂಪ..!

ಸೂರ್ಯಕುಮಾರ್ ಯಾದವ್‌ ಅವರ 18 ಎಸೆತಗಳ ಬಿರುಸಿನ ಅರ್ಧಶತಕ ಹಾಗೂ ಕೆಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮ ಮೊದಲ ವಿಕೆಟ್‌ಗೆ ಆಡಿದ 96 ರನ್‌ಗಳ ಭರ್ಜರಿ ಜೊತೆಯಾಟದ ನೆರವಿನಿಂದ ಟೀಮ್‌ ಇಂಡಿಯಾ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್‌ ಮೊತ್ತ ದಾಖಲಿಸಿದೆ.

Guwahati  2nd T20I india vs South Africa Suryakumar Yadav KL Rahul Virat Kohli shines with super Fifty san
Author
First Published Oct 2, 2022, 8:57 PM IST

ಗುವಾಹಟಿ (ಅ.2): ಆರಂಭದಲ್ಲಿ ಕೆಎಲ್‌ ರಾಹುಲ್‌, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಟೀಮ್‌ ಇಂಡಿಯಾ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಬೃಹತ್‌ ಮೊತ್ತ ದಾಖಲಿಸಿದೆ. ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ 3 ವಿಕೆಟ್‌ಗೆ 237 ರನ್‌ ಬಾರಿಸಿದೆ. ಸೂರ್ಯಕುಮಾರ್‌ ಯಾದವ್‌ (61ರನ್‌, 22 ಎಸೆತ, 5 ಬೌಂಡರಿ, 5 ಸಿಕ್ಸರ್‌), ಕೆಎಲ್‌ ರಾಹುಲ್‌ (57ರನ್‌, 28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಹಾಗೂ ವಿರಾಟ್‌ ಕೊಹ್ಲಿ (49*ರನ್‌, 28 ಎಸೆತ, 7 ಬೌಂಡರಿ, 1 ಸಿಕ್ಸರ್) ಆಡಿದ ಸ್ಪೋಟಕ ಆಟದಿಂದ ಟೀಮ್‌ ಇಂಡಿಯಾ ದೊಡ್ಡ ಮೊತ್ತ ದಾಖಲಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ತಂಡವೊಂದರ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ತಂಡ ಜೊಹಾನ್ಸ್‌ಬರ್ಗ್‌ ಟಿ20 ಪಂದ್ಯದಲ್ಲಿ 6 ವಿಕೆಟ್‌ಗೆ 236 ರನ್‌ ಬಾರಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಗರಿಷ್ಠ ಮೊತ್ತವಾಗಿತ್ತು. ಇದು ಟಿ20 ಇತಿಹಾಸದಲ್ಲಿ ತಂಡವೊಂದರ ನಾಲ್ಕನೇ ಗರಿಷ್ಠ ಮೊತ್ತ ಎನಿಸಿದೆ. ವಿರಾಟ್‌ ಕೊಹ್ಲಿ ಕೇವಲ 1 ರನ್‌ನಿಂದ ಅರ್ಧಶತಕ ವಂಚಿತರಾದರೂ, ಟಿ20ಯಲ್ಲಿ ಅತಿವೇಗವಾಗಿ 11 ಸಾವಿರ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. 

11 ರನ್‌ಗಳ ಅಂತರದಲ್ಲಿ ಆರಂಭಿಕರ ವಿಕೆಟ್‌ ಪತನವಾದ ಬಳಿಕ ಸೂರ್ಯಕುಮಾರ್‌ ಯಾದವ್‌ ಹಾಗೂ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್‌ ಅನ್ನು ಬೆಂಡೆತ್ತಿದರು. ಇದರಿಂದಾಗಿ 15ನೇ ಓವರ್‌ ವೇಳೆಗೆ ಭಾರತ 150ರ ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ ನಿಧಾನಗತಿಯಲ್ಲಿ ಆಟವಾಡಿದರೆ, ಸೂರ್ಯಕುಮಾರ್‌ ಯಾದವ್‌ ಮಾತ್ರ ಗುವಾಹಟಿ ಮೈದಾನದಲ್ಲಿ ರುದ್ರತಾಂಡವ ಮಾಡಿದರು. ಕ್ಷಣಮಾತ್ರದಲ್ಲಿ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ 17ನೇ ಓವರ್‌ ವೇಳೆಗೆ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದ್ದರು. ಈ ಅವಧಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಟಿ20ಯಲ್ಲಿ ತಮ್ಮ 9ನೇ ಅರ್ಧಶತಕ ಬಾರಿಸಿ ಮಿಂಚಿದರು. ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಜೋಡಿ ಪ್ರತಿ ಓವರ್‌ಗೆ 14.57ರಂತೆ ಕೇವಲ 42 ಎಸೆತಗಳಲ್ಲಿ 102 ರನ್‌ ಜೊತೆಯಾಟವಾಡಿದರು. ಇದು ಟೀಮ್‌ ಇಂಡಿಯಾ ಪರವಾಗಿ ಅತಿವೇಗದ ಶತಕದ ಜೊತೆಯಾಟ ಎನಿಸಿದೆ.

ಮೊದಲ ವಿಕೆಟ್‌ಗೆ ರೋಹಿತ್‌-ಕೆಎಲ್‌ 96 ರನ್‌ ಜೊತೆಯಾಟ: ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮ ಹಾಗೂ ಕೆಎಲ್‌ ರಾಹುಲ್‌ ಅದ್ಭುತವಾಗಿ ಆಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 96 ರನ್‌ ಜೊತೆಯಾಟವಾಡುವ ಮೂಲಕ ಭಾರತದ ಬೃಹತ್‌ ಮೊತ್ತಕ್ಕೆ ವೇದಿಕೆ ಸಿದ್ದಪಡಿಸಿದ್ದರು. ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ನಾಯಕ ರೋಹಿತ್‌ ಶರ್ಮ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಇದ್ದ 43 ರನ್‌ ಬಾರಿಸಿ ಮೊದಲಿಗರಾಗಿ ಔಟಾದರು. ಕೇಶವ್‌ ಮಹಾರಾಜ್‌ ಎಸೆತದಲ್ಲಿ ಸ್ಟಬ್ಸ್‌ಗೆ ಕ್ಯಾಚ್‌ ನೀಡಿ ರೋಹಿತ್‌ ಹೊರನಡೆದರು. ಬಳಿಕ ಕೆಎಲ್‌ ರಾಹುಲ್‌ಗೆ ಜೊತೆಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ತಂಡದ ಮೊತ್ವನ್ನು 100ರ ಗಡಿ ದಾಟಿಸಿದರು. ಈ ಅವಧಿಯಲ್ಲಿ ಕೆಎಲ್‌ ರಾಹುಲ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ 20ನೇ ಅರ್ಧಶತಕ ಬಾರಿಸಿದರು. ಕೇವಲ 24 ಎಸೆತಗಳಲ್ಲಿ ಅವರು ಅರ್ಧಶತಕದ ಗಡಿ ದಾಟಿಸಿದದರು. ತಂಡದ ಮೊತ್ತ 107 ರನ್‌ ಆಗಿದ್ದಾಗ, 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ ಬಾರಿಸಿದ್ದ ಕೆಎಲ್‌ ರಾಹುಲ್‌. ಕೇಶವ್‌ ಮಹಾರಾಜ್‌ ಎಸೆತದಲ್ಲಿ ಎಲ್‌ಬಿಯಾಗಿ ಹೊರಡೆದರು. ಸತತ ಎರಡು ಓವರ್‌ಗಳಲ್ಲಿ ಕೇಶವ್‌ ಮಹಾರಾಜ್‌ ಈ ವಿಕೆಟ್‌ಗಳನ್ನು ಪಡೆದಾಗ ಭಾರತ ಹಿನ್ನಡೆ ಕಾಣುವ ಆತಂಕ ಎದುರಿಸಿತ್ತು. 

ಟಿ20ಯಲ್ಲಿ ಭಾರತದ ಆಟಗಾರನ 3ನೇ ವೇಗದ ಅರ್ಧಶತಕ: ಸೂರ್ಯಕುಮಾರ್‌ ಯಾದವ್‌ ಬಾರಿಸಿದ 18 ಎಸೆತಗಳ ಅರ್ಧಶತಕ ಟಿ20ಯಲ್ಲಿ ಭಾರತದ ಆಟಗಾರನೊಬ್ಬನ ಮೂರನೇ ಅತಿವೇಗದ ಅರ್ಧಶತಕ ಎನಿಸಿದೆ. 2007ರಲ್ಲಿ ಯುವರಾಜ್‌ ಸಿಂಗ್‌ ಇಂಗ್ಲೆಂಡ್‌ ವಿರುದ್ಧ 12 ಎಸೆತಗಳ ಅರ್ಧಶತಕ ಟಿ20ಯ ವಿಶ್ವದಾಖಲೆಯಾಗಿದ್ದರೆ, 2021ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ದುಬೈನಲ್ಲಿ ಕೆಎಲ್‌ ರಾಹುಲ್‌ ಬಾರಿಸಿದ 18 ಎಸೆತಗಳ ಅರ್ಧಶತಕ 2ನೇ ಸ್ಥಾನದಲ್ಲಿದೆ. 2009ರಲ್ಲಿ ಶ್ರೀಲಂಕಾ ವಿರುದ್ಧ ಗೌತಮ್‌ ಗಂಭೀರ್‌ (19 ಎಸೆತ), 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2009ರಲ್ಲಿ ಶ್ರೀಲಂಕಾ ವಿರುದ್ಧ ಯುವರಾಜ್‌ ಸಿಂಗ್‌ ಬಾರಿಸಿದ ತಲಾ 20 ಎಸೆತಗಳ ಅರ್ಧಶತಕ ನಂತರದ ಸ್ಥಾನದಲ್ಲಿದೆ.
 

Follow Us:
Download App:
  • android
  • ios