ಫೈನಲ್ ಪಂದ್ಯದಲ್ಲಿ ಅತ್ಯಂತ ರೋಚಕ ಹೋರಾಟ ಕೊನೆ ಕ್ಷಣದ ವರೆಗೂ ಪಂದ್ಯ ಯಾರ ಕಡೆ ವಾಲುತ್ತಿದೆ ಅನ್ನೋದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದ ಪರಿಸ್ಥಿತಿ. ಪ್ರಬಲ ಹೋರಾಟದ ನಡುವೆ ಗುಲ್ಬರ್ಗ ಚೊಚ್ಚಲ ಮಹಾರಾಜ ಟ್ರೋಫಿ ಗೆದ್ದುಕೊಂಡಿದೆ.
ಬೆಂಗಳೂರು(ಆ.26): ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸಿದ ಮಹಾರಾಜ ಟ್ರೋಫಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಳೆದ ಒಂದು 20 ದಿನಗಳಿಂದ ನಡೆದ ರೋಚಕ ಹೋರಾಟದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಚೊಚ್ಚಲ ಮಹಾರಾಜ ಟ್ರೋಫಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 11 ರನ್ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮನೀಶ್ ಪಾಂಡೆ ನೇತೃತ್ವದ ಗುಲ್ಬರ್ಗ ಹೊಸ ಇತಿಹಾಸ ರಚಿಸಿದೆ. ಗೆಲುವಿಗೆ 221 ರನ್ ಬೃಹತ್ ಟಾರ್ಗೆಟ್ ಪಡೆದ ಬೆಂಗಳೂರು ಬ್ಲಾಸ್ಟರ್ಸ್ ತೀವ್ರ ಒತ್ತಡಕ್ಕೆ ಸಿಲುಕಿತು. ಹೀಗಾಗಿ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಫೈನಲ್ ಪಂದ್ಯದಲ್ಲಿ ನಿರಾಸೆ ಅನುಭಿವಸಿದರು. ಕೇವಲ 16 ರನ್ ಸಿಡಿಸಿ ಔಟಾದರು. ರಿತೇಶ್ ಭಟ್ಕಳ್ ಹಾಗೂ ಪ್ರಣವ್ ಭಾಟಿಯಾ ದಾಳಿಗೆ ಬೆಂಗಳೂರು ಬ್ಲಾಸ್ಟರ್ಸ್ ತತ್ತರಿಸಿತು. ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕುಶ್ ಮರಾಠೆ ಕೇವಲ 1 ರನ್ ಸಿಡಿಸಿ ಔಟಾದರು.
ಶಿವಕುಮಾರ್ ರಕ್ಷಿತ್ ಡಕೌಟ್ ಆದರು. ಅನಿರುದ್ಧ್ ಜೋಶಿ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು.ಆರಂಭಿಕ ಎಲ್ ಆರ್ ಚೇತನ್ ಏಕಾಂಗಿ ಹೋರಾಟ ಮುಂದುವರಿಸಿದರು. ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಜಗದೀಶ್ ಸುಚಿತ್ 5 ರನ್ ಸಿಡಿಸಿ ನಿರ್ಗಮಿಸಿದರು. ವಿಕೆಟ್ ಪತನದ ನಡುವೆಯೂ ಚೇತನ್ ಅಬ್ಬರಿಸಿದರು. 21 ಎಸೆತದಲ್ಲಿ ಅರ್ಧಶತಕ ಪೂರೈಸಿದರು.
ಕ್ರಾಂತಿ ಕುಮಾರ್ ದಿಟ್ಟ ಹೋರಾಟ ನೀಡಿದರು. ಕ್ರಾಂತಿ ಕುಮಾರ್ ಹಾಗೂ ಎಲ್ ಆರ್ ಚೇತನ್ ಹೋರಾಟ ಬೆಂಗಳೂರು ಬ್ಲಾಸ್ಚರ್ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇತನ್ 40 ಎಸೆತದಲ್ಲಿ 91 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಕ್ರಾಂತಿ ಕುಮಾರ್ 21 ಎಸೆತದಲ್ಲಿ 47 ರನ್ ಸಿಡಿಸಿ ಅಬ್ಬರಿಸಿದರು. ಪ್ರಮುಖ ಎರಡು ವಿಕೆಟ್ ಕಳೆದುಕೊಂಡರೂ ಬೆಂಗಳೂರು ಬ್ಲಾಸ್ಟರ್ಸ್ ಸೋಲಿನ ದವೆಡೆಯಿಂದ ಗೆಲುವಿನ ಹಾದಿಯಲ್ಲಿ ಸಾಗತೊಡಗಿತು.
ರೋನಿತ್ ಮೋರೆ ಹಾಗೂ ರಿಶಿ ಬೋಪ್ಪಣ್ಣ ಅಬ್ಬರ ಮತ್ತೆ ಗುಲ್ಬರ್ಗ ತಂಡದ ತಲೆನೋವು ಹೆಚ್ಚಿಸಿತು. ಬೆಂಗಳೂರು ಗೆಲುವಿಗೆ ಅಂತಿಮ 6 ಎಸೆತದಲ್ಲಿ 21 ರನ್ ಅವಶ್ಯತೆ ಇತ್ತು. ಆದರೆ ರೋನಿತ್ ಮೋರೆ ಹೋರಾಟ ನಡೆಸಿ ಅಜೇಯ 22 ರನ್ ಸಿಡಿಸಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಗುಲ್ಬರ್ಗ 11 ರನ್ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಮಹಾರಾಜ ಟ್ರೋಫಿ ಗೆದ್ದುಕೊಂಡಿತು.
ಕ್ವಾಲಿಫೈಯರ್ ಸೋಲಿಗೆ ಸೇಡು ತೀರಿಸಿಕೊಂಡ ಗುಲ್ಬರ್ಗ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 227 ರನ್ ಸಿಡಿಸಿತ್ತು. ಬೃಹತ್ ಮೊತ್ತ ಚೇಸ್ ಮಾಡಿದ ಗುಲ್ಬರ್ಗ 183 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಬೆಂಗಳೂರು 44 ರನ್ ಗೆಲವು ಸಾಧಿಸಿತ್ತು. ಇದೀಗ ಫೈನಲ್ ಪಂದ್ಯದಲ್ಲಿ ಗುಲ್ಬರ್ಗ್ 220 ರನ್ ಸಿಡಿಸಿತ್ತು.
