ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್‌ ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 600  ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಆ್ಯಂಡರ್‌ಸನ್‌ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ಆಸೀಸ್ ಕ್ರಿಕೆಟ್ ದಂತಕಥೆ ಕೂಡಾ ಜೈ ಹೋ ಎಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮೆಲ್ಬೊರ್ನ್(ಆ.26): ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ 600 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ಇಂಗ್ಲೆಂಡ್ ಅನುಭವಿ ವೇಗಿಯನ್ನು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಗ್ಲೆನ್ ಮೆಗ್ರಾಥ್ ಕೊಂಡಾಡಿದ್ದಾರೆ. ಆಗಸ್ಟ್ 25ರಂದು ಆ್ಯಂಡರ್‌ಸನ್‌ 600 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ವೇಗಿ ಹಾಗೂ ಒಟ್ಟಾರೆ ನಾಲ್ಕನೇ ಬೌಲರ್ ಎನ್ನುವ ಗೌರವಕ್ಕೆ ಭಾಜನರಾದರು.

ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಆ್ಯಂಡರ್‌ಸನ್‌ ತಮ್ಮ ಪ್ರದರ್ಶನದ ಬಗ್ಗೆ ಅಷ್ಟೇನು ಖಷಿಯಾಗಿರಲಿಲ್ಲ. ಆದರೆ ಆ ಬಳಿಕ ಮೂರು ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಯಶಸ್ವಿಯಾಗಿದ್ದಾರೆ. 

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಆ್ಯಂಡರ್‌ಸನ್‌ ಗುಣಗಾನ ಮಾಡಿದ ಮೆಗ್ರಾಥ್: 124 ಟೆಸ್ಟ್‌ ಪಂದ್ಯಗಳನ್ನಾಡಿ 563 ವಿಕೆಟ್ ಕಬಳಿಸಿರುವ ಗ್ಲೆನ್‌ ಮೆಗ್ರಾಥ್, ಇಂಗ್ಲೆಂಡ್ ವೇಗಿಯ ಸಾಧನೆಯ ಗುಣಗಾನ ಮಾಡಿದ್ದಾರೆ. ಆ್ಯಂಡರ್‌ಸನ್‌ ಅವರಿಗಿರುವಷ್ಟು ಬೌಲಿಂಗ್ ಕೌಶಲ್ಯ ನನಗಿರಲಿಲ್ಲ ಎಂದು ಆಸೀಸ್ ಮಾಜಿ ವೇಗಿ ಮೆಗ್ರಾಥ್ ಅಭಿಪ್ರಾಯಪಟ್ಟಿದ್ದಾರೆ. ಆ್ಯಂಡರ್‌ಸನ್‌ ಸರಾಗವಾಗಿ ಇನ್‌ಸ್ವಿಂಗ್ ಹಾಗೂ ಔಟ್‌ಸ್ವಿಂಗ್ ಬೌಲಿಂಗ್ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಆ್ಯಂಡರ್‌ಸನ್‌ ಬೌಲಿಂಗ್ ಎದುರಿಸುವುದು ಬ್ಯಾಟ್ಸ್‌ಮನ್‌ಗಳ ಪಾಲಿಗೆ ಕಷ್ಟವಾಗುತ್ತದೆ ಎಂದು ಮೆಗ್ರಾಥ್ ಹೇಳಿದ್ದಾರೆ.

ಆ್ಯಂಡರ್‌ಸನ್‌ ಅವರ ಸಾಧನೆಯನ್ನು ಆಸೀಸ್ ವೇಗಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಿಗೆ ಹೋಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ಗಳಿಸಿದ ರನ್, ಆಡಿದ ಪಂದ್ಯಗಳ ದಾಖಲೆಗಳನ್ನು ಯಾರಿದಂಲೂ ಮುರಿಯಲು ಸಾಧ್ಯವಿಲ್ಲವೋ ಅದೇ ರೀತಿ ವೇಗದ ಬೌಲಿಂಗ್ ವಿಭಾಗದಲ್ಲಿ ಆ್ಯಂಡರ್‌ಸನ್‌ ದಾಖಲೆ ಮುರಿಯುವುದು ಕಷ್ಟ ಎಂದು ಮೆಗ್ರಾಥ್ ಹೇಳಿದ್ದಾರೆ.