ವಿನಯ್ ಕುಮಾರ್ ಬದಲಿಗೆ ಈತನನ್ನಾದರೂ ಬೌಲಿಂಗ್ ಕೋಚ್ ಮಾಡಿ: ಬಿಸಿಸಿಐ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಗಂಭೀರ್..!
ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಇದೀಗ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾ ಮೂಲದ ಮಾಜಿ ವೇಗಿಯನ್ನು ನೇಮಕ ಮಾಡಲು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ: ರಾಹುಲ್ ದ್ರಾವಿಡ್ ಅವರಿಂದ ತೆರವಾಗಿರುವ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಇದೀಗ ತಮಗೆ ಬೇಕಾದಂತ ಸಹಾಯಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲು ಗಂಭೀರ್ ಮುಂದಾಗಿದ್ದಾರೆ. ಆದರೆ ಗಂಭೀರ್‌ಗೆ ಆರಂಭದಿಂದಲೇ ಬಿಸಿಸಿಐನಿಂದ ನಿರಾಸೆ ಎದುರಾಗಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಹೌದು, ಗೌತಮ್ ಗಂಭೀರ್, ಕಳೆದ ಜುಲೈ 09ರಂದು ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಆರ್ ವಿನಯ್ ಕುಮಾರ್, ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಅವರನ್ನು ಆಯ್ಕೆ ಮಾಡಿ ಎಂದು ಗಂಭೀರ್ ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಆದರೆ ವಿನಯ್ ಕುಮಾರ್ ಹಾಗೂ ಜಾಂಟಿ ರೋಡ್ಸ್ ಆಯ್ಕೆಯ ಕುರಿತಂತೆ ಬಿಸಿಸಿಐ ನಿರಾಸಕ್ತಿ ತೋರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಅಂಬಾನಿ ಮಗನ ಮದುವೆಯಲ್ಲಿ ಪಾಂಡ್ಯ ಜತೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ ಫಿಫಾ ಅಧ್ಯಕ್ಷ..! ವಿಡಿಯೋ ವೈರಲ್
ಇದೀಗ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ನೇಮಿಸುವಂತೆ ಬಿಸಿಸಿಐಗೆ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗಂಭೀರ್ ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ಮಾರ್ಗದರ್ಶಕರಾಗಿದ್ದಾಗ ಮಾರ್ಕೆಲ್ ತಂಡದ ಬೌಲಿಂಗ್ ಕೋಚ್ ಆಗಿದ್ದರು.
ಈ ನಡುವೆ ಬಿಸಿಸಿಐ ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಚಿಂತನೆ ನಡೆಸುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಶೀಘ್ರವೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಗೌತಮ್ ಗಂಭೀರ್ ಮಾತಿಗೆ ಉಲ್ಟಾ ಹೊಡೆದ ಬಿಸಿಸಿಐ; ಗೌತಿ ಶಿಫಾರಸಿಗೆ ಡೋಂಟ್ ಕೇರ್..!
ನೀಳಕಾಯದ ಮಾಜಿ ವೇಗಿ ಮಾರ್ನೆ ಮಾರ್ಕೆಲ್ 2006ರಿಂದ 2018ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವೇಗ ಪಡೆಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಅವಧಿಯಲ್ಲಿ ಹರಿಣಗಳ ಪಡೆ ಪರ ಮಾರ್ನೆ ಮಾರ್ಕೆಲ್, 86 ಟೆಸ್ಟ್, 117 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ. ಮಾರ್ನೆ ಮಾರ್ಕೆಲ್ ಈ ಹಿಂದೆ ಕಳೆದ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಒಂದು ವೇಳೆ ಮಾರ್ನೆ ಮಾರ್ಕೆಲ್ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆದರೆ ಕಳೆದ ಮೂರು ವರ್ಷಗಳಿಂದ ಭಾರತ ತಂಡದ ಬೌಲರ್‌ಗಳಿಗೆ ಮಾರ್ಗದರ್ಶನ ನೀಡಿದ್ದ ಪರಾಸ್ ಮಾಂಬ್ರೆ ಅವರ ಸ್ಥಾನವನ್ನು ತುಂಬಲಿದ್ದಾರೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದಾಗಿನಿಂದ ಪರಾಸ್ ಮಾಂಬ್ರೆ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.