10ರಲ್ಲಿ 6 ಟೆಸ್ಟ್ ಸೋತ ಗಂಭೀರ್ ಹುದ್ದೆ ಮೇಲೆ ತೂಗುಗತ್ತಿ: ರಣಜಿ ಆಡಲು ಆಟಗಾರರಿಗೆ ಖಡಕ್ ವಾರ್ನಿಂಗ್!
ಭಾರತದ ಕೋಚ್ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ಅವರ ಸ್ಥಾನ ತೂಗುಯ್ಯಾಲೆಯಲ್ಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಗಂಭೀರ್ ಭವಿಷ್ಯವನ್ನು ನಿರ್ಧರಿಸಲಿದೆ.
ಸಿಡ್ನಿ: ರಾಹುಲ್ ದ್ರಾವಿಡ್ ಬಳಿಕ ಭಾರತದ ಕೋಚ್ ಹುದ್ದೆ ಅಲಂಕರಿಸಿರುವ ಗೌತಮ್ ಗಂಭೀರ್, ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುವ ಸಂಗತಿ. ಗಂಭೀರ್ ಕೋಚ್ ಆದ ಬಳಿಕ ಭಾರತ 10 ಟೆಸ್ಟ್ ಆಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಇದರಲ್ಲಿ 2 ಟೆಸ್ಟ್ ಬಾಂಗ್ಲಾ ವಿರುದ್ಧ. ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್ ಸೋತಿದೆ. ಇನ್ನು, ಏಕದಿನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವಿಲ್ಲ.
ಹುದ್ದೆ ಅಲಂಕರಿಸಿ ಕೆಲ ತಿಂಗಳಷ್ಟೇ ಆಗಿದ್ದರೂ, ಸದ್ಯ ಗಂಭೀರ್ ಸ್ಥಾನ ತೂಗುಯ್ಯಾಲೆಯಲ್ಲಿದೆ. ಸದ್ಯಕ್ಕೆ ಅವರ ಸ್ಥಾನದ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೂ, ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಗಂಭೀರ್ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿದೆ. ಒಂದು ವೇಳೆ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದ್ದರೆ ಗಂಭೀರ್‌ರನ್ನು ಕೆಳಗಿಳಿಸಿ ಬೇರೊಬ್ಬ ಕೋಚ್ ನೇಮಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ.
ಮತ್ತೆ ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಬದ್ಧತೆ ಇದ್ದರೆ ರಣಜಿ ಆಡಿ
ಸಿಡ್ನಿ: ಸರಣಿ ಸೋಲಿನ ಬಳಿಕ ಭಾರತದ ಆಟಗಾರರ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋಚ್ ಗೌತಮ್ ಗಂಭೀರ್, ರಣಜಿ ಟ್ರೋಫಿ ಆಡುವಂತೆ ತಂಡದ ಎಲ್ಲ ಆಟಗಾರರಿಗೂ ತಾಕೀತು ಮಾಡಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ 5 ತಿಂಗಳಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. 5 ತಿಂಗಳಲ್ಲೇ ಸಾಕಷ್ಟು ಬದಲಾವಣೆ ಆಗಬಹುದು. ಜುಲೈನ ಇಂಗ್ಲೆಂಡ್ ವಿರುದ್ಧ ಸರಣಿಗೂ ಮುನ್ನ ಏನಾಗಲಿದೆ ನೋಡೋಣ’ ಎಂದರು.
ಹಿರಿಯ ಆಟಗಾರರ ಬಗ್ಗೆ ಮಾತನಾಡಿದ ಅವರು, ‘ಎಲ್ಲರೂ ರಣಜಿ ಆಡಬೇಕು ಎಂಬುದು ನನ್ನ ಬಯಕೆ. ಅದು ನಾವು ದೇಸಿ ಕ್ರಿಕೆಟ್‌ಗೆ ನೀಡುವ ಬೆಲೆ. ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಆಟಗಾರರಿಗೆ ಬದ್ಧತೆ ಇದ್ದರೆ ಅವರು ರಣಜಿಯ ಎಲ್ಲಾ ಪಂದ್ಯಗಳನ್ನೂ ಆಡಬೇಕು. ದೇಸಿ ಕ್ರಿಕೆಟ್‌ಗೆ ಆದ್ಯತೆ ನೀಡದಿದ್ದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಬೇಕಾದ ಆಟಗಾರನಾಗಲು ಸಾಧ್ಯವಿಲ್ಲ’ ಎಂದು ಗಂಭೀರ್ ಹೇಳಿದರು. ಇನ್ನು, ಭಾರತದ ಮಾಜಿ ಕ್ರಿಕೆಟಿಗರ ಸುನಿಲ್ ಗವಾಸ್ಕರ್ ಕೂಡಾ ಎಲ್ಲಾ ಆಟಗಾರರು ರಣಜಿ ಆಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಡ್ನಿ ಮೈದಾನದಲ್ಲಿ ಖಾಲಿ ಜೇಬು ತೋರಿಸಿ ಆಸೀಸ್ ಫ್ಯಾನ್ಸ್ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
ಕೊಹ್ಲಿ, ರೋಹಿತ್ ಬಗ್ಗೆ ಭವಿಷ್ಯ ನುಡಿಯಲ್ಲ
ಕೊಹ್ಲಿ, ರೋಹಿತ್‌ರ ಟೆಸ್ಟ್ ವೃತ್ತಿ ಬದುಕಿನ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ನಾನು ಯಾವುದೇ ಆಟಗಾರನ ಬಗ್ಗೆ ಭವಿಷ್ಯ ನುಡಿಯಲ್ಲ. ಅದು ಅವರಿಗೆ ಬಿಟ್ಟ ನಿರ್ಧಾರ. ಅವರಲ್ಲಿ ಕ್ರಿಕೆಟ್‌ನ ಹಸಿವಿದೆ. ಉತ್ಸಾಹವಿದೆ. ಅವರು ಭಾರತೀಯ ಕ್ರಿಕೆಟ್‌ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅವರು ಯಾವುದೇ ನಿರ್ಧಾರ ಕೈಗೊಂಡರೂ, ಅದು ಭಾರತೀಯ ಕ್ರಿಕೆಟ್‌ಗೆ ಉತ್ತಮವಾಗಿರಲಿದೆ’ ಎಂದು ಹೇಳಿದರು.