Asianet Suvarna News Asianet Suvarna News

'ಹೊಟ್ಟೆಕಿಚ್ಚಿಗೆ ಮಿತಿಯಿರಲಿ': ಯುವಿ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ರೋಲ್ ಆದ ಗೌತಮ್ ಗಂಭೀರ್..!

ಯುವರಾಜ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ರೋಲ್ ಆದ ಗೌತಮ್ ಗಂಭೀರ್
ಯುವರಾಜ್ ಸಿಂಗ್, ಸೀಮಿತ ಓವರ್‌ಗಳ ಕ್ರಿಕೆಟ್‌ನ ಅತ್ಯುತ್ತಮ ಕ್ರಿಕೆಟಿಗ ಎಂದಿದ್ದ ಗಂಭೀರ್
ಹಾಗಿದ್ರೆ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಅಲ್ವಾ ಎಂದು ಕಾಲೆಳೆದ ಫ್ಯಾನ್ಸ್

Gautam Gambhir India best white ball cricketer tweet for Yuvraj Singh gets trolled kvn
Author
First Published Dec 13, 2022, 2:10 PM IST

ನವದೆಹಲಿ(ಡಿ.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸೋಮವಾರ(ಡಿ.12) ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಯುವಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಇನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್, ಯುವರಾಜ್ ಸಿಂಗ್ ಅವರಿಗೆ ಶುಭ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.

ಯುವರಾಜ್ ಸಿಂಗ್‌ ಅವರಂತೆ ಗೌತಮ್‌ ಗಂಭೀರ್ ಕೂಡಾ 2007ರ ಟಿ20 ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಯುವರಾಜ್ ಸಿಂಗ್‌ ಅವರಿಗೆ ಶುಭಕೋರುವ ಭರದಲ್ಲಿ, ಸೀಮಿತ ಓವರ್‌ಗಳ ಕ್ರಿಕೆಟ್‌ ಕಂಡ ಅತ್ಯುತ್ತಮ ಆಟಗಾರ ಎಂದು ಗೌತಮ್‌ ಗಂಭೀರ್ ಗುಣಗಾನ ಮಾಡಿದ್ದರು. ಇದನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

ಟಿ20 ಹಾಗೂ ಏಕದಿನ ಕ್ರಿಕೆಟ್‌ ಸೇರಿ ಸುಮಾರು 10 ಸಾವಿರಕ್ಕೂ ಅಧಿಕ ರನ್‌ ಬಾರಿಸಿರುವ ಯುವರಾಜ್ ಸಿಂಗ್, ಭಾರತ ಕಂಡಂತಹ ಅತಿದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಸೀಮಿತ ಓವರ್‌ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರ ಎಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಭಾರತ ಕ್ರಿಕೆಟ್ ತಂಡವು ಜಗತ್ತಿಗೆ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್‌, ಸೌರವ್ ಗಂಗೂಲಿ, ಎಂ ಎಸ್ ಧೋನಿ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರಂತಹ ಕ್ರಿಕೆಟಿಗರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.  

Multan Test ಇಂಗ್ಲೆಂಡ್‌ ಎದುರು ರೋಚಕ ಸೋಲುಂಡ ಪಾಕ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ರೇಸ್‌ನಿಂದ ಔಟ್..!

ಹಲವು ನೆಟ್ಟಿಗರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಅವರಿಗಿಂತ ಅತ್ಯುತ್ತಮ ಕ್ರಿಕೆಟಿಗರು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಇನ್ನೋರ್ವ ನೆಟ್ಟಿಗರು ಏಕದಿನ ಕ್ರಿಕೆಟ್‌ನಲ್ಲಿ 18426 ರನ್‌ ಹಾಗೂ 154 ವಿಕೆಟ್‌ ಕಬಳಿಸಿದ ಆಟಗಾರನನ್ನು ಮರೆತುಬಿಡೋಣ ಬಿಡಿ ಎಂದು ಸಚಿನ್ ತೆಂಡುಲ್ಕರ್‌ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಈ ಮನುಷ್ಯ ಮನಸ್ಸಿನೊಳಗೆ ಅದೆಷ್ಟು ಅಸೂಹೆಯನ್ನು ಹೊಂದಿರಬಹುದು. ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿ ಅವರ ಮೇಲೆ ಇವರಷ್ಟು ಅಸೂಹೆ ತೋರುವ ಮತ್ತೊಬ್ಬ ವ್ಯಕ್ತಿಯನ್ನು ನಾನು ಇಡೀ ಜಗತ್ತಿನಲ್ಲಿ ನೋಡಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಯುವರಾಜ್ ಸಿಂಗ್ ವೃತ್ತಿಬದುಕಿನ ಪಕ್ಷಿನೋಟ:

2000ನೇ ಇಸವಿಯಲ್ಲಿ ಕೀನ್ಯಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಯುವಿ, ಸುಮಾರು 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದರು. ಭಾರತ ಪರ 304 ಏಕದಿನ 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 8,701, 1900 ಹಾಗೂ 1,177 ರನ್‌ ಬಾರಿಸಿದ್ದರು. ಇದಷ್ಟೇ ಬೌಲಿಂಗ್‌ನಲ್ಲಿ 148 ವಿಕೆಟ್ ಕಬಳಿಸಿ ಮಿಂಚಿದ್ದರು.

ಟಿ20 ವಿಶ್ವಕಪ್ ಗೆಲುವಿನ ರೂವಾರಿ ಯುವಿ:

2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಯುವಿ, ಇಂಗ್ಲೆಂಡ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್ ಒಂದೇ ಓವರ್‌ನಲ್ಲಿ 6 ಎಸೆತಗಳಲ್ಲಿ 6 ಸಿಡಿಸಿ ಅಬ್ಬರಿಸಿದ್ದರು. ಇದಷ್ಟೇ ಅಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇಂದಿಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ.

2011ರ ಏಕದಿನ ವಿಶ್ವಕಪ್‌ ಗೆದ್ದ ಕೆಚ್ಚೆದೆಯ ಬ್ಯಾಟರ್:

2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಮಹತ್ತರ ಪಾತ್ರವಹಿಸಿದ್ದರು. ಯುವಿ ಬ್ಯಾಟಿಂಗ್‌ನಲ್ಲಿ 300+ ರನ್ ಹಾಗೂ ಬೌಲಿಂಗ್‌ನಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ 50+ ರನ್ ಹಾಗೂ 5+ ವಿಕೆಟ್ ಕಬಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಗೂ ಯುವಿ ಪಾತ್ರರಾಗಿದ್ದರು. 

Follow Us:
Download App:
  • android
  • ios