WTC Champions 3 ಮಾದರಿ ವಿಶ್ವಕಪ್ ಗೆದ್ದ ಮೊದಲ ತಂಡ ಆಸೀಸ್! ಇತಿಹಾಸ ಬರೆದ ಕಾಂಗರೂ ಪಡೆ
ಐಸಿಸಿ ಟೆಸ್ಟ್ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಟೆಸ್ಟ್, ಏಕದಿನ ಹಾಗೂ ಟಿ20 ವಿಶ್ವಕಪ್ ಜಯಿಸಿದ ಕಾಂಗರೂ ಪಡೆ
ಈ ಸಾಧನೆ ಮಾಡಿದ ಮೊದಲ ತಂಡ ಎನ್ನುವ ಹೆಗ್ಗಳಿಕೆ ಆಸೀಸ್ ಪಾಲು
ಲಂಡನ್(ಜೂ.12): 2021-23ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆದ ನಡೆದ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸಂಘಟಿತ ಪ್ರದರ್ಶನ ತೋರುವ ಮೂಲಕ ಟೆಸ್ಟ್ ಕ್ರಿಕೆಟ್‌ನ ನೂತನ ಬಾಸ್ ಎನಿಸಿಕೊಂಡಿದೆ. ಇದರ ಜತೆಗೆ ಆಸ್ಪ್ರೇಲಿಯಾ ಏಕದಿನ, ಟಿ20 ಹಾಗೂ ಟೆಸ್ಟ್ ಮೂರೂ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆದ ಮೊದಲ ತಂಡ ಎನಿಸಿಕೊಂಡಿದೆ.
ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 1987, 1999, 2003, 2007 ಹಾಗೂ 2015ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದರೆ, 2021ರಲ್ಲಿ ಟಿ20 ವಿಶ್ವಕಪ್, 2023ರಲ್ಲಿ ಟೆಸ್ಟ್ ವಿಶ್ವಕಪ್ ಜಯಿಸಿದೆ. 2006, 2009ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ಆಸೀಸ್ ಗೆದ್ದಿತ್ತು. ಇನ್ನು ಈ ಬಾರಿ ತಂಡದಲ್ಲಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮೂರೂ ಮಾದರಿಯ ವಿಶ್ವಕಪ್ ಗೆಲುವಿನಲ್ಲಿ ಭಾಗಿಯಾದ ಹೆಗ್ಗಳಿಕೆಗೆ ಪಾತ್ರರಾದರು.
ಐಸಿಸಿ ಟ್ರೋಫಿಗಾಗಿ ನಿಲ್ಲದ ಭಾರತದ ಹುಡುಕಾಟ!
ಭಾರತ ಐಸಿಸಿ ಫೈನಲ್‌ನಲ್ಲಿ ಎಡವುತ್ತಿರುವುದು ಇದೇ ಮೊದಲೇನಲ್ಲ. ತಂಡಕ್ಕೆ ಒಂದು ದಶಕದಿಂದ ಸೋಲಿನ ಸರಪಳಿ ಕಳಚಲು ಸಾಧ್ಯವಾಗಿಲ್ಲ. 2013ರಲ್ಲಿ ಕೊನೆ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ಈ ಬಳಿಕ ಐಸಿಸಿ ಟೂರ್ನಿಗಳಲ್ಲಿ ಸೆಮೀಸ್ ಅಥವಾ ಫೈನಲ್‌ನಲ್ಲಿ ಮುಗ್ಗರಿಸಿದೆ. ಧೋನಿ ನಾಯಕತ್ವದಲ್ಲಿ 2014ರ ಟಿ20 ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿದ್ದ ತಂಡ 2015ರ ಏಕದಿನ ವಿಶ್ವಕಪ್ ಹಾಗೂ 2016ರ ಟಿ20 ವಿಶ್ವಕಪ್‌ನ ಸೆಮೀಸ್ನಲ್ಲಿ ಸೋತಿತ್ತು.
WTC Final: ಟೀಂ ಇಂಡಿಯಾ ಟೆಸ್ಟ್ ವಿಶ್ವಕಪ್ ಸೋತಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣ
ಇದಾದ ಬಳಿಕ ಕೊಹ್ಲಿ ನಾಯಕತ್ವದಡಿ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮೀಸ್ ಹಾಗೂ 2021ರ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಪರಾಭವಗೊಂಡಿದೆ. ಬಳಿಕ 2022ರ ಟಿ20 ವಿಶ್ವಕಪ್ ಸೆಮೀಸ್, 2023ರ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸೋತಿದೆ. ಈ ಎರಡೂ ಟೂರ್ನಿಗೆ ರೋಹಿತ್ ನಾಯಕರಾಗಿದ್ದರು.
ಟೆಸ್ಟ್ ವಿಶ್ವಕಪ್ ಸತತ 2ನೇ ಬಾರಿಯೂ ಟೆಸ್ಟ್ ವಿಶ್ವಕಪ್ ಮಿಸ್
ಈವರೆಗೆ 2 ಬಾರಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ನಡೆದಿದ್ದು, 2 ಬಾರಿಯೂ ಭಾರತ ಫೈನಲ್‌ನಲ್ಲಿ ಎಡವಿ ಪ್ರಶಸ್ತಿ ಕೈಚೆಲ್ಲಿದೆ. 2019-21ರ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು. ಆ ಪಂದ್ಯ ಇಂಗ್ಲೆಂಡ್‌ನ ಸೌಥಾಂಪ್ಟನ್ನಲ್ಲಿ ನಡೆದಿತ್ತು.
ಹೇಗಿತ್ತು ಟೆಸ್ಟ್ ವಿಶ್ವಕಪ್?
ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 169 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ, ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಸಮಯೋಚಿತ ಅರ್ಧಶತಕದ ನೆರವಿನಿಂದ 296 ರನ್‌ಗಳಿಗೆ ಸರ್ವಪತನ ಕಂಡಿತು.
ಇನ್ನು 173 ರನ್‌ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಅಲೆಕ್ಸ್ ಕ್ಯಾರಿ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ 444 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಆಸ್ಟ್ರೇಲಿಯಾ ಎದುರು ಮಂಡಿಯೂರಿತು.