ಕಿಂಗ್‌ಸ್ಟನ್‌: ಅಮೆ​ರಿ​ಕ​ದಲ್ಲಿ ಆಫ್ರಿಕಾ ಮೂಲದ ವ್ಯಕ್ತಿ ಜಾರ್ಜ್ ಫ್ಲಾಯ್ಡ್‌ ಮೇಲಾದ ಹಲ್ಲೆಯನ್ನು ಖಂಡಿಸಿ ವಿಶ್ವ​ದೆ​ಲ್ಲೆಡೆ ಪ್ರತಿ​ಭ​ಟನೆ, ಟೀಕೆ ವ್ಯಕ್ತ​ವಾ​ಗು​ತ್ತಿ​ರುವ ಬೆನ್ನಲ್ಲೇ ಇಂಡಿ​ಯ​ನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿಎಲ್‌)ನಲ್ಲಿ ಜನಾಂಗೀಯ ನಿಂದನೆಗೆ ಗುರಿ​ಯಾ​ಗಿದ್ದೆ ಎಂದು ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಡ್ಯಾರನ್‌ ಸ್ಯಾಮಿ ಇನ್‌ಸ್ಟಾಗ್ರಾಂನಲ್ಲಿ ಬರೆ​ದು​ಕೊಂಡಿ​ದ್ದಾರೆ. 

ವೆಸ್ಟ್ ಇಂಡೀಸ್‌ಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಡ್ಯಾರನ್ ಸ್ಯಾಮಿ 2013 ಹಾಗೂ 2014ರ ಐಪಿಎಲ್ ಆವೃತ್ತಿಯ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಜನಾಂಗೀಯ ನಿಂದನೆ ಎದುರಿಸಿದ್ದಾಗಿ ವಿಂಡೀಸ್ ಕ್ರಿಕೆಟಿಗ ಹೇಳಿದ್ದಾರೆ. 

‘ಐಪಿ​ಎಲ್‌ ವೇಳೆ ಪ್ರೇಕ್ಷ​ಕರು ನನ್ನನ್ನು ಹಾಗೂ ಶ್ರೀಲಂಕಾದ ತಿಸಾರ ಪೆರೇರಾರನ್ನು ‘ಕಾ​ಲು (ಕ​ರಿ​ಯ​)’ ಎಂದು ಕರೆ​ಯು​ತ್ತಿ​ದ್ದರು. ಆಗ ನನಗೆ ಆ ಪದದ ಅರ್ಥ ತಿಳಿ​ದಿ​ರ​ಲಿಲ್ಲ. ಆ ಪದದ ಅರ್ಥ ತಿಳಿದ ಮೇಲೆ ಸಿಟ್ಟು ಬರು​ತ್ತಿದೆ’ ಎಂದು ಸ್ಯಾಮಿ ಬರೆ​ದು​ಕೊಂಡಿ​ದ್ದಾರೆ. 'ಕಾಲು' ಅಂದು ಕರೆಯುತ್ತಿದ್ದಾಗ ನಾನು ಬಲಿಷ್ಠ ವ್ಯಕ್ತಿ ಅಂತ ಕರೆಯುತ್ತಿದ್ದಾರೆ ಎಂದು ಅಂದುಕೊಂಡಿದ್ದೆ, ಆದರೆ ಆ ಪದದ ನಿಜವಾದ ಅರ್ಥ ತಿಳಿದಾಗ ಸಿಟ್ಟು ಬರುತ್ತದೆ ಎಂದು ಕೆಲವು ತಿಂಗಳುಗಳ ಹಿಂದಷ್ಟೇ ಪಾಕಿಸ್ತಾನದ ಗೌರವ ಪೌರತ್ವ ಪಡೆದ ಸ್ಯಾಮಿ ಹೇಳಿದ್ದಾರೆ.

ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

ಸ್ಯಾಮಿ ಹೇಳಿಕೆಗೆ ತಿಪ್ಪೆ ಸಾರಿಸುವ ಕೆಲಸಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ಮುಂದಾಗಿದೆ. ಯಾವ ಆಟಗಾರರು ಹೀಗೆ ಕರೆದಿಲ್ಲ, ಆದರೆ ಕೆಲವು ಫ್ಯಾನ್ಸ್‌ ಹೀಗೆ ಕರೆದಿರಬಹುದು ಎಂದು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಹಿರಿಯ ಸದಸ್ಯರು ಹೇಳಿದ್ದಾರೆ.

ದೊಡ್ಡಣ್ಣನನ್ನೇ ನಲುಗಿಸಿದ ಪ್ರತಿಭಟನೆ; ಬಂಕರ್‌ನಲ್ಲಿ ಅಡಗಿ ಕುಳಿತ ಟ್ರಂಪ್!

ಜಂಟಲ್‌ಮ್ಯಾನ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ನಲ್ಲಿ ಇಂತಹ ನಡೆದಿರುವುದು ನಿಜಕ್ಕೂ ದುರಂತವೇ ಸರಿ. ಫುಟ್ಬಾಲ್ ಕ್ರೀಡೆಯಲ್ಲಿ ಜನಾಂಗೀಯ ನಿಂದನೆ ಮಾಡಿರುವುದು ಸಾಬೀತಾದರೇ ಅಂತವರನ್ನು ಮೈದಾನಕ್ಕೆ ಪ್ರವೇಶಿಸುವುದನ್ನೇ ನಿಷೇಧಿಸಲಾಗುತ್ತದೆ.

ಜಗತ್ತಿನಲ್ಲಿ ನನ್ನಂತವರನ್ನು ಹೇಗೆ ನೋಡುತ್ತಿದೆ ಎನ್ನುವುದು ಐಸಿಸಿ ಹಾಗೂ ಇತರೆ ಕ್ರಿಕೆಟ್ ಬೋರ್ಡ್‌ಗಳಿಗೆ ಗೊತ್ತಿಲ್ಲವೇ? ಇಂತಹ ಸಾಮಾಜಿಕ ಅಸಮಾನತೆಯ ವಿರುದ್ಧ ನೀವ್ಯಾಕೆ  ದ್ವನಿ ಎತ್ತುವುದಿಲ್ಲ. ಇಂತಹ ಘಟನೆ ಅಮೆರಿಕದಲ್ಲಿ ಮಾತ್ರ ನಡೆಯುತ್ತಿಲ್ಲ. ಪ್ರತಿ ದಿನ ಬೇರೆ ಬೇರೆ ಕಡೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ, ನೀವೇನು ಹೇಳುತ್ತೀರ ಎನ್ನುವುದನ್ನು ಆಲಿಸಲು ಬಯಸುತ್ತೇನೆ ಎಂದು ಐಸಿಸಿಗೆ ಟ್ವೀಟ್ ಮೂಲಕ ಸ್ಯಾಮಿ ಪ್ರಶ್ನಿಸಿದ್ದರು.

ವಿಂಡೀಸ್ ಹಿರಿಯ ಆಲ್ರೌಂಡರ್ ಡ್ಯಾರನ್ ಸ್ಯಾಮಿ 38 ಟೆಸ್ಟ್, 126 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 1323, 1871 ಹಾಗೂ 587 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಒಟ್ಟಾರೆ ಇನ್ನೂರಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.