ನವದೆಹಲಿ(ಆ.15): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚೌಹ್ಹಾಣ್ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿಯಲ್ಲಿ ಅವರಿಗೆ ವೆಂಟಿಲೇಟರ್‌ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.

ಹೌದು, ಗುರ್‌ಗಾವ್‌ನ ಮೆದಂತಾ ಆಸ್ಪತ್ರೆಯಲ್ಲಿ ಚೇತನ್‌ ಚೌಹ್ಹಾಣ್ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಚೇತನ್ ಜುಲೈನಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಲಖನೌನಲ್ಲಿರುವ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೂ ಸೋಂಕಿನಿಂದ ಗುಣಮುಖರಾಗಿಲ್ಲ. ಇದರ ನಡುವೆ ಅವರು ಮೂತ್ರಕೋಶ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇಂದು ಮುಂಜಾನೆ ಅವರ ಕಿಡ್ನಿ ಫೇಲ್ಯೂರ್ ಆಗಿರುವುದು ತಿಳಿದುಬಂದಿದೆ. ಇದರ ಜತೆಗೆ ಅವರು ಬಹು ಅಂಗಾಂಗ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ಅವರು ಈ ಸಮಸ್ಯೆಯಿಂದ ಗೆದ್ದುಬರಲಿ ಎಂದು ಆಶೀಸುತ್ತೇನೆಂದು DDCA ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

SPB ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದಲೇ ಗಾಯಕ ಸಂದೇಶ
 
ಚೇತನ್ ಚೌಹ್ಹಾಣ್ ಪ್ರಸ್ತುತ ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಸೈನಿಕ್ ವೆಲ್‌ಫೇರ್, ಹೋಮ್‌ ಗಾರ್ಡ್ಸ್, ಸಿವಿಲ್ ಸೆಕ್ಯೂರಿಟಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. 2019ರಲ್ಲಿ ಅವರು ರಾಜ್ಯ ಕ್ರೀಡಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

70ರ ದಶಕದಲ್ಲಿ ಚೇತನ್ ಚೌಹ್ಹಾಣ್ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎನಿಸಿದ್ದರು. 1969ರಿಂದ 1978ರ ಅವಧಿಯಲ್ಲಿ ಚೇತನ್ ಟೀಂ ಇಂಡಿಯಾ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದು, 31.57ರ ಸರಾಸರಿಯಲ್ಲಿ 2,084 ರನ್ ಬಾರಿಸಿದ್ದಾರೆ. ಇನ್ನು ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

1970ರ ದಶಕದಲ್ಲಿ ಸುನಿಲ್ ಗವಾಸ್ಕರ್ ಜತೆ ಯಶಸ್ವಿ ಆರಂಭಿಕನಾಗಿ ಗುರುತಿಸಿಕೊಂಡಿದ್ದ ಚೌಹ್ಹಾಣ್ 10 ಶತಕಗಳ ಜತೆಯಾಟದ ಜತೆಗೆ ಮೂರು ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ಚೇತನ್ ಮಹಾರಾಷ್ಟ್ರ ಹಾಗೂ ಡೆಲ್ಲಿ ಪರ ರಣಜಿ ಟ್ರೋಫಿಯನ್ನು ಆಡಿದ್ದಾರೆ. ಇದರ ಜತೆಗೆ 1981ರಲ್ಲಿ ಚೇತನ್ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ.