IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಸ್ಥಾನ ಅಲಂಕರಿಸಿದ ಅಜಿತ್ ಅಗರ್‌ಕರ್
* 15ನೇ ಆವೃತ್ತಿಯ ಐಪಿಎಲ್‌ಗೆ ಭರ್ಜರಿ ಸಿದ್ದತೆ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್
* ಸಹಾಯಕ ಕೋಚ್ ಆಗಿ ಡೆಲ್ಲಿ ತಂಡ ಕೂಡಿಕೊಂಡ ಅಜಿತ್ ಅಗರ್‌ಕರ್
* ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್
ನವದೆಹಲಿ(ಫೆ.25): ಟೀಂ ಇಂಡಿಯಾ (Team India) ಮಾಜಿ ವೇಗದ ಬೌಲರ್ ಅಜಿತ್ ಅಗರ್‌ಕರ್ (Ajit Agarkar) 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕವಾಗಿದ್ದಾರೆ. ಈ ವಿಷಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಖಚಿತಪಡಿಸಿದೆ. ಇದೀಗ ಅಜಿತ್ ಅಗರ್‌ಕರ್ ಹೆಡ್ ಕೋಚ್ ರಿಕಿ ಪಾಂಟಿಂಗ್, ಬೌಲಿಂಗ್ ಕೋಚ್ ಜೇಮ್ಸ್ ಹೋಪ್ ಹಾಗೂ ಇಬ್ಬರು ಸಹಾಯಕ ಕೋಚ್‌ಗಳಾದ ಶೇನ್ ವಾಟ್ಸನ್ ಹಾಗೂ ಪ್ರವಿಣ್ ಆಮ್ರೆ ಜತೆ ಕಾರ್ಯನಿರ್ವಹಿಸಲಿದ್ದಾರೆ.
ಈ ಬಾರಿಯ ಐಪಿಎಲ್ ಆವೃತ್ತಿಗೆ ನಾನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಕೂಡಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗಿನ ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿದ್ದೇವೆ. ನಮ್ಮದು ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ತಂಡವಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳ ಪ್ರತಿಭಾನ್ವಿತ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ರಿಷಭ್ ಪಂತ್ (Rishabh Pant) ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಒಳ್ಳೆಯ ಕಾಂಬಿನೇಷನ್ ಹೊಂದಿದ್ದಾರೆ. ಇವರೆಲ್ಲರ ಜತೆ ಒಟ್ಟಾಗಿ ಕೆಲಸ ಮಾಡಲು ನಾನು ಉತ್ಸುಕರಾಗಿದ್ಧೇನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ನಿರ್ಮಿಸಲು ಕಾತರರಾಗಿದ್ದೇವೆ ಎಂದು ಅಜಿತ್ ಅಗರ್‌ಕರ್ ಹೇಳಿದ್ದಾರೆ.
ಅಜಿತ್ ಅಗರ್‌ಕರ್, ಭಾರತ ಕ್ರಿಕೆಟ್ ತಂಡದ (Indian Cricket Team) ಪರ 26 ಟೆಸ್ಟ್, 191 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಮುಂಬೈ ಮೂಲದ ವೇಗಿ ಅಗರ್‌ಕರ್, ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದಾರೆ.
IPL Auction 2022 ಉತ್ತಮ ಖರೀದಿ ಮೂಲಕ ಬೆಸ್ಟ್ ಟೀಂ ಕಟ್ಟಿದ ಡೆಲ್ಲಿ, ಹರಾಜಿನ ಬಳಿಕ ಹೀಗಿದೆ ಡಿಸಿ ತಂಡ!
ಕಳೆದ 14 ಆವೃತ್ತಿಗಳಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದುವರೆಗೂ ಕಪ್ ಗೆಲ್ಲಲು ಯಶಸ್ವಿಯಾಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೂರು ಬಾರಿ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಇನ್ನು 2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿತ್ತು.
ಇನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಹಾಗೂ ಏನ್ರಿಚ್ ನೊಕಿಯಾ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈ ಕೆಳಗಿನ ಆಟಗಾರರು ಖರೀದಿಸಿದೆ
ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರ ಲಿಸ್ಟ್:
ಡೇವಿಡ್ ವಾರ್ನರ್ : 6.25 ಕೋಟಿ ರೂಪಾಯಿ
ಮಿಚೆಲ್ ಮಾರ್ಶ್ : 6.50 ಕೋಟಿ ರೂಪಾಯಿ
ಮುಸ್ತಾಫಿಜುರ್ ರೆಹಮಾನ್ : 2 ಕೋಟಿ ರೂಪಾಯಿ
ಶಾರ್ದೂಲ್ ಠಾಕೂರ್ : 10.75 ಕೋಟಿ ರೂಪಾಯಿ
ಕುಲ್ದೀಪ್ ಯಾದವ್ : 2 ಕೋಟಿ ರೂಪಾಯಿ
ಅಶ್ವಿನ್ ಹೆಬ್ಬಾರ್ : 20 ಲಕ್ಷ ರೂಪಾಯಿ
ಸರ್ಫರಾಜ್ ಖಾನ್ : 20 ಲಕ್ಷ ರೂಪಾಯಿ
ಕಮಲೇಶ್ ನಾಗರಕೋಟಿ : 1.10 ಕೋಟಿ ರೂಪಾಯಿ
ಕೆಎಸ್ ಭರತ್ : 2 ಕೋಟಿ ರೂಪಾಯಿ
ಸೈಯದ್ ಖಲೀಲ್ ಅಹಮ್ಮದ್ : 5.25 ಕೋಟಿ ರೂಪಾಯಿ
ಮನ್ದೀಪ್ ಸಿಂಗ್ : 1.10 ಕೋಟಿ ರೂಪಾಯಿ
ಲುಂಗಿಸನಿ ಎನ್‌ಗಿಡಿ : 50 ಲಕ್ಷ ರೂಪಾಯಿ
ಚೇತನ್ ಸಕಾರಿಯಾ : 4.20 ಕೋಟಿ ರೂಪಾಯಿ
ಯಶ್ ಧುಲ್ : 50 ಲಕ್ಷ ರೂಪಾಯಿ
ವಿಕ್ಕಿ ಒಸ್ಟ್‌ವಾಲ್ : 20 ಲಕ್ಷ ರೂಪಾಯಿ
ರಿಪಲ್ ಪಟೇಲ್ : 20 ಲಕ್ಷ ರೂಪಾಯಿ
ಲಲಿತ್ ಯಾದವ್ : 65 ಲಕ್ಷ ರೂಪಾಯಿ
ರೋವ್ಮನ್ ಪೊವೆಲ್ : 2.80 ಕೋಟಿ ರೂಪಾಯಿ
ಟಿಮ್ ಸೈಫರ್ಟ್ : 50 ಲಕ್ಷ ರೂಪಾಯಿ
ಪ್ರವೀಣ್ ದುಬೆ : 50 ಲಕ್ಷ ರೂಪಾಯಿ