ಭಾರತೀಯರ ಮೇಲೆಯೇ ಸುಳ್ಳು ಸುಳ್ಳು ಆರೋಪ ಹೊರಿಸಿದ ಪಾಕ್ ಸುಳ್ಳುಬುರುಕ ಅಫ್ರಿದಿ!
* ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳ ಮೇಲೆ ಅಫ್ರಿದಿ ಗಂಭೀರ ಆರೋಪ
* 2005ರಲ್ಲಿ ಪಾಕ್ ತಂಡದ ಬಸ್ ಮೇಲೆ ಕಲ್ಲು ತೂರಲಾಗಿತ್ತು ಎಂದ ಅಫ್ರಿದಿ
* ಅಫ್ರಿದಿ ಸುಳ್ಳು ಬಯಲು ಮಾಡಿದ ನೆಟ್ಟಿಗ
ಕರಾಚಿ(ಜು.16): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆಯಾದರೂ, ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುವುದರ ಕುರಿತಂತೆ ಇನ್ನು ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸದ್ಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಹೋಗಬೇಕೇ ಅಥವಾ ಬೇಡವೇ ಎನ್ನುವ ಕುರಿತಂತೆ ಪಾಕಿಸ್ತಾನ ಸರ್ಕಾರದ ಅನುಮತಿಯನ್ನು ಎದುರು ನೋಡುತ್ತಿದೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನದಲ್ಲಿ ಈಗಿರುವ ಸರ್ಕಾರ ಬದಲಾಗುವ ಸಾಧ್ಯತೆಯಿದ್ದು, ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವಿಕೆಯ ಕುರಿತಂತೆ ಪಿಸಿಬಿ ಹಾಗೂ ಐಸಿಸಿಗೆ ಮತ್ತಷ್ಟು ತಲೆನೋವು ಉಂಟಾಗುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲವೆನಿಸಿದ್ದರೂ ಸಹಾ ಕೆಲವು ಪಾಕಿಸ್ತಾನದ ಮಂದಿ, 2023ರ ಏಕದಿನ ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಬಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮುಂಬರುವ 2023ರ ಏಷ್ಯಾಕಪ್ ಆಡಲು ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡದಿದ್ದರೇ, ಪಾಕ್ ತಂಡ ಕೂಡಾ ಏಕದಿನ ವಿಶ್ವಕಪ್ ಆಡಲು ಭಾರತ ಪ್ರವಾಸ ಮಾಡಬಾರದು ಎನ್ನುವುದು ಅವರ ವಾದವಾಗಿದೆ.
ಹಲವು ಪಾಕಿಸ್ತಾನ ಮಾಜಿ ಕ್ರಿಕೆಟಿಗರು, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕ್ ತಂಡವು ಭಾರತಕ್ಕೆ ಹೋಗಬಾರದು ಎನ್ನುವ ಸಲಹೆ ನೀಡಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ದಿಗ್ಗಜ ಆಲ್ರೌಂಡರ್ ಶಾಹಿದ್ ಅಫ್ರಿದಿ ಪ್ರಕಾರ, ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಬೇಕು ಹಾಗೂ 2023ರ ಏಕದಿನ ವಿಶ್ವಕಪ್ ಗೆದ್ದು ಸ್ಪಷ್ಟ ಸಂದೇಶ ನೀಡಬೇಕು ಎನ್ನುವ ಮೆಸೇಜ್ ನೀಡಿದ್ದಾರೆ.
2005ರಲ್ಲಿ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ತಂಡವಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಪಾಕಿಸ್ತಾನ ತಂಡವು ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು ಎಂದು ಹೇಳಿದ್ದಾರೆ.
"2005ರ ಪ್ರವಾಸವು ನಮ್ಮ ತಂಡದ ಪಾಲಿಗೆ ಸಾಕಷ್ಟು ಒತ್ತಡದ ಪರಿಸ್ಥಿತಿಯಿಂದ ಕೂಡಿತ್ತು. ಒಂದು ವೇಳೆ ನಾವು ಬೌಂಡರಿ ಅಥವಾ ಸಿಕ್ಸರ್ ಬಾರಿಸಿದರೂ ಸಹಾ ಯಾರೊಬ್ಬರೂ ಚಪ್ಪಾಳೆ ತಟ್ಟುತ್ತಿರಲಿಲ್ಲ. ನಾವು ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಹೋಟೆಲ್‌ಗೆ ನಮ್ಮ ತಂಡದ ಬಸ್‌ನಲ್ಲಿ ಹೋಗುವಾಗ ಸಾರ್ವಜನಿಕರು ನಾವಿದ್ದ ಬಸ್ ಮೇಲೆ ಕಲ್ಲು ತೂರಿದ್ದರು. ಭಾರತ ಪ್ರವಾಸ ಮಾಡುವಾಗ ಖಂಡಿತವಾಗಿಯೂ ಒತ್ತಡ ನಮ್ಮ ಮೇಲಿರುತ್ತದೆ" ಎಂದು ಅಫ್ರಿದಿ ಹೇಳಿದ್ದಾರೆ.
'ನಾನು ಈವರೆಗೂ ಮಾಡಿದ ಅತ್ಯಂತ ಮುಜುಗರದ ಸಂಗತಿ..' ತಾಯಿಗೆ ಮುಖ ತೋರಿಸಲು ನಾಚಿಕೆ ಪಟ್ಟಿದ್ದೇಕೆ ದ್ರಾವಿಡ್!
"ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಡುವಾಗ ಒಂದು ರೀತಿ ಮಜಾ ಇರುತ್ತದೆ. ಯಾರೆಲ್ಲಾ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಬಾರದು, ವಿಶ್ವಕಪ್ ಬಹಿಷ್ಕರಿಸಬೇಕು ಎನ್ನುತ್ತಿದ್ದಾರೋ ನಾನು ಅವರ ವಿರುದ್ದವಿದ್ದೇನೆ. ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಲಿ ಹಾಗೂ ಅಲ್ಲಿ ವಿಶ್ವಕಪ್ ಗೆಲ್ಲಲಿ ಎಂದು ಬಯಸುತ್ತೇನೆ" ಎಂದು ಅಫ್ರಿದಿ ಹೇಳಿದ್ದಾರೆ.
ಅಫ್ರಿದಿ ಹೇಳಿದ್ದು ಶುದ್ದು ಸುಳ್ಳು:
ಶಾಹಿದ್ ಅಫ್ರಿದಿ, ಬೆಂಗಳೂರಿನಲ್ಲಿ ನಮ್ಮ ಬಸ್ ಮೇಲೆ ಸಾರ್ವಜನಿಕರು ಕಲ್ಲು ತೂರಿದ್ದು ಶುದ್ದ ಸುಳ್ಳು ಎನ್ನುವುದನ್ನು ವಿಜಯ್ ಎನ್ನುವ ನೆಟ್ಟಿಗರು ಬಟಾಬಯಲು ಮಾಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 2005ರಲ್ಲಿ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಿದ್ದಾಗ, ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಿದ್ದವು. ಆಗ ಧರ್ಮಶಾಲಾದಲ್ಲಿ ಪಾಕ್ ಬಸ್ ಮೇಲೆ ಕಲ್ಲು ತೂರಿದ್ದು ವರದಿಯಾಗಿತ್ತು. ಆದರೆ 2005ರಲ್ಲಿ ಬೆಂಗಳೂರಿನಲ್ಲಿ ಯಾರೊಬ್ಬರು ಪಾಕ್ ಬಸ್ ಮೇಲೆ ಕಲ್ಲು ತೂರಾಟ ನಡೆಸಿರಲಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಸುಳ್ಳುಬುರಕ ಅಫ್ರಿದಿಯ ಮುಖವಾಡ ಕಳಚಿಟ್ಟಿದ್ದಾರೆ.