ಲಾಹೋರ್(ಜ.12): ಪಾಕಿಸ್ತಾನ ತಂಡದ ಅನುಭವಿ ಆಲ್ರೌಂಡರ್‌ ಶೋಯೆಬ್‌ ಮಲಿಕ್‌ ಸ್ಪೋರ್ಟ್ಸ್ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದ್ದು, ಸಾನಿಯಾ ಮಿರ್ಜಾ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ನ ಹೈ ಪರ್ಫಾಮೆನ್ಸ್ ಸೆಂಟರ್‌ನಲ್ಲಿ ನಡೆದ 2021ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಆಟಗಾರರ ಡ್ರಾಫ್ಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ. ಈ ಅಪಘಾತವಾದ ಬಳಿಕ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶೋಯೆಬ್ ಮಲಿಕ್, ನಾನು ಕ್ಷೇಮವಾಗಿದ್ದೇನೆ. ಇದೊಂದು ಸಣ್ಣ ಅಪಘಾತವಷ್ಟೇ, ಎಲ್ಲರೂ ಸುರಕ್ಷಿತವಾಗಿದ್ದೇವೆ. ನನ್ನ ಯೋಗಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಮಲಿಕ್ ಟ್ವೀಟ್‌ ಮಾಡಿದ್ದಾರೆ.  

ಪತಿ, ಮಗನೊಂದಿಗೆ ಮರುಭೂಮಿಯಲ್ಲಿ ಸಾನಿಯಾ ಮಿರ್ಜಾ ಮೋಜು, ಮಸ್ತಿ!

ಪಾಕಿಸ್ತಾನ ತಂಡದ ಮಾಜಿ ನಾಯಕ ಮಲಿಕ್, ಪಿಸಿಬಿ ಕಚೇರಿಯಿಂದ ವೇಗವಾಗಿ ತಮ್ಮ ಸ್ಪೋರ್ಟ್ಸ್‌ ಕಾರು ಚಲಾಯಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಕಾರು ರೆಸ್ಟೋರೆಂಟ್‌ವೊಂದರ ಬಳಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ಪಾಕಿಸ್ತಾನ ತಂಡದ ಪರ 35 ಟೆಸ್ಟ್, 287 ಏಕದಿನ ಹಾಗೂ 116 ಟಿ20 ಪಂದ್ಯಗಳನ್ನಾಡಿರುವ ಶೋಯೆಬ್ ಮಲಿಕ್, ಸದ್ಯದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳುವ ಯಾವುದೇ ಆಲೋಚನೆ ಇಲ್ಲ ಎನ್ನುವುನ್ನು ಸ್ಪಷ್ಟಪಡಿಸಿದ್ದಾರೆ. 

2021ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯು ಫೆಬ್ರವರಿ 20ರಿಂದ ಮಾರ್ಚ್ 22ರವರೆಗೆ ಕರಾಚಿ ಮತ್ತು ಲಾಹೋರ್‌ನಲ್ಲಿ ಆಯೋಜಿಸಲು ಪಿಸಿಬಿ ತೀರ್ಮಾನಿಸಿದೆ. ಹಾಲಿ ಚಾಂಪಿಯನ್ ಕರಾಚಿ ಕಿಂಗ್ಸ್‌ ತಂಡವು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಎದುರು ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.