Asianet Suvarna News Asianet Suvarna News

KSCA: ಮಾಜಿ ಸ್ಪಿನ್ನರ್‌ ರಘುರಾಮ್‌ ಭಟ್‌ ಕೆಎಸ್‌ಸಿಎ ಅಧ್ಯಕ್ಷ

ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಇತರ ಸ್ಥಾನಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಸ್ಪಿನ್ನರ್‌ ರಘುರಾಮ್‌ ಭಟ್‌ ಕೆಎಸ್‌ಸಿಎಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

former left arm spinner raghuram bhat is new ksca president san
Author
First Published Nov 9, 2022, 7:31 PM IST

ಬೆಂಗಳೂರು (ನ.9): 1981-82ರಲ್ಲಿ ಬಾಂಬೆ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದ ಮಾಜಿ ಎಡಗೈ ಸ್ಪಿನ್ನರ್‌ ರಘುರಾಮ್‌ ಭಟ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಎಸ್‌ಸಿಎ ಚುನಾವಣೆಯನ್ನು ನವೆಂಬರ್‌ 20ರಂದು ಮಾಡಲು ನಿರ್ಧಾರ ಮಾಡಲಾಗಿತ್ತು. ಅದರಂತೆ ಸಲ್ಲಿಕೆಯಾಗಿದ್ದ ನಾಮಪತ್ರವನ್ನು ವಾಪಾಸ್‌ ಪಡೆಯಲು ಬುಧವಾರ ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರಘುರಾಮ್‌ ಭಟ್‌ ಅವರೊಂದಿಗೆ ಬಿಎನ್‌ ಮಧುಕರ್‌, ಸಂಜಯ್‌ ಪೋಳ್‌ ಹಾಗೂ ವಿನಯ್‌ ಮೃತ್ಯುಂಜಯ ಅವರು ಸ್ಪರ್ಧೆ ಮಾಡಿದ್ದರು. ಆದರೆ, ಇವರು ನಾಮಪತ್ರ ವಾಪಾಸ್‌ ಪಡೆದುಕೊಂಡ ಕಾರಣ ರಘುರಾಮ್‌ ಭಟ್‌ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ, ಕೆಎಸ್‌ಸಿಡ ಆಡಳಿತ ಮಂಡಳಿ ಹಾಗೂ ಇತರ ಸದಸ್ಯ ಸ್ಥಾನಗಳ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಆಡಳಿತದಲ್ಲಿರುವ ಬಹುತೇಕ ವ್ಯಕ್ತಿಗಳು ಕೂಲಿಂಗ್‌ ಆಫ್‌ ಅವಧಿಗೆ ತೆರಳಿದ್ದರೆ, ಕಳೆದ ಬಾರಿ ಅಧಿಕಾರದಲ್ಲಿರುವವರ ಪೈಕಿ, ಶಾವೀರ್‌ ತಾರಾಪುರ್‌  ಅವರು ಮತ್ತೊಂದು ಅವಧಿಗೆ ಮುಂದುವರಿದಿದ್ದಾರೆ. ಕಾರ್ಯದರ್ಶಿಯಾಗಿ ಎ.ಶಂಕರ್‌ ಹಾಗೂ ಬಿಕೆ ಸಂಪತ್‌ಕುಮಾರ್‌ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

KCSA Election: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ವೇಳಾಪಟ್ಟಿ ಫಿಕ್ಸ್‌

ದಕ್ಷಿಣ ಕನ್ನಡ ಪುತ್ತೂರು ಮೂಲದವರಾದ ಅದ್ವೈ ರಘುರಾಮ್‌ ಭಟ್‌,  ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 82 ಪಂದ್ಯಗಳನ್ನು ಆಡಿದ್ದಾರೆ. 1980ರಿಂದ 1993ರವರೆಗೆ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಇವರು, 374 ವಿಕೆಟ್‌ ಕಬಳಿಸಿದ್ದಾರೆ. ವೃತ್ತಿಜೀವನದಲ್ಲಿ ಕೇವಲ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಇವರು ಪ್ರತಿನಿಧಿಸಿದ್ದರು.  1983ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ 165ನೇ ಟೆಸ್ಟ್‌ ಆಟಗಾರನಾಗಿ ಪದಾರ್ಪಣೆ ಮಾಡಿದ್ದ ಇವರು, ಅದೇ ತಿಂಗಳಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌ ಆಡಿದ್ದರು. ಆ ಬಳಿಕ ಅವರು ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಅಂಪೈರ್‌, ಕೋಚ್‌ ಹಾಗೂ ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2011ರ ಜುಲೈನಲ್ಲಿ ಗೋವಾ ಕ್ರಿಕೆಟ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 64ನೇ ವರ್ಷದಲ್ಲಿ ಈಗ ಕೆಎಸ್‌ಸಿಎ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಕೆಎಸ್‌ಸಿಎ ಮಾಜಿ ಅಧ್ಯಕ್ಷ ರೋಜರ್‌ ಬಿನ್ನಿ, ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿದ್ದ್ ಜೆ.ಅಭಿರಾಮ್‌ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ. ಆಯ್ಕೆಯಾದವರ ಅಧಿಕಾರವಧಿ 2025ರವರೆಗೆ ಇರಲಿದೆ.

ನಾನೆಂದು ಬಿಸಿಸಿಐ ಅಧ್ಯಕ್ಷನಾಗುತ್ತೇನೆಂದುಕೊಂಡಿರಲಿಲ್ಲ: ರೋಜರ್ ಬಿನ್ನಿ

ಕೆಎಸ್‌ಸಿಎ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ಸದಸ್ಯರು(2025ರ ವರೆಗೆ ಅಧಿಕಾರವಧಿ): ರಘುರಾಮ್ ಭಟ್ (ಅಧ್ಯಕ್ಷ), ಬಿ.ಕೆ. ಸಂಪತ್ ಕುಮಾರ್ (ಉಪಾಧ್ಯಕ್ಷ), ಎ. ಶಂಕರ್ (ಕಾರ್ಯದರ್ಶಿ), ಶಾವೀರ್ ತಾರಾಪುರ್‌ (ಜಂಟಿ ಕಾರ್ಯದರ್ಶಿ), ಇ.ಎಸ್. ಜಯರಾಮ್ (ಖಜಾಂಚಿ), ಆಡಳಿತ ಸಮಿತಿ ಸದಸ್ಯರು: ಬೆಂಗಳೂರು ವಲಯ: ಎಂ.ಎಸ್. ಕೇಶವ್ (ಸ್ವಸ್ತಿಕ್ ಯೂನಿಯನ್ ಸಿಸಿ), ಕೆ.ವಿ. ಮಂಜುನಾಥ ರಾಜು (ಹೆಮಂಡ್ಸ್ ಸಿಸಿ), ಎಂ.ಎಸ್. ವಿನಯ್ (ಫ್ರೆಂಡ್ಸ್‌ ಯೂನಿಯನ್ ಸಿಸಿ). ಮೈಸೂರು ವಲಯ: ಹರಿಕೃಷ್ಣಕುಮಾರ್ ಆರ್.ಕೆ. (ನ್ಯಾಷನಲ್ ಸಿಸಿ, ಮೈಸೂರು), ಶಿವಮೊಗ್ಗ: ಎಚ್‌.ಎಸ್. ಸದಾನಂದ (ದುರ್ಗಿಗುಡಿ ಕ್ರಿಕೆಟ್‌ ಸಂಸ್ಥೆ), ತುಮಕೂರು: ಕೆ. ಶಶಿಧರ್ (ವೀನಸ್ ಸಿಸಿ), ಧಾರವಾಡ: ನಿಖಿಲ್ ಎಂ ಭೂಸದ್ (ಬಿಡಿಕೆ ಕ್ರೀಡಾ ಪ್ರತಿಷ್ಠಾನ. ಹುಬ್ಬಳ್ಳಿ),  ರಾಯಚೂರು: ಸುಜಿತ್ ಬೊಹರಾ (ಸಿಟಿ ಎಲೆವನ್ ಸಿಸಿ), ಮಂಗಳೂರು: ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್ ಕ್ಲಬ್), ಸಂಜಯ್ ಪೋಳ್ ಹಾಗೂ ಎನ್.ಎನ್. ಯುವರಾಜ್ (ಆಜೀವ ಸದಸ್ಯರ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾದವರು)

Follow Us:
Download App:
  • android
  • ios