ಐಸಿಸಿ ವಿಶ್ವಕಪ್ ಟೂರ್ನಿಗೆ ಸಿದ್ದತೆ ನಡೆಸುತ್ತಿದೆ ಟೀಂ ಇಂಡಿಯಾಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಐಸಿಸಿ ಟಿ20 ವಿಶ್ವಕಪ್ಟಿ20 ವಿಶ್ವಕಪ್ ಟೂರ್ನಿಗೆ ಶಮಿ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಡೌಟ್ ಎಂದ ಮಾಜಿ ವೇಗಿ
ನವದೆಹಲಿ(ಜೂ.19): ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಟೀಂ ಇಂಡಿಯಾ ಈಗಿನಿಂದಲೇ ಭರದ ಸಿದ್ದತೆಗಳನ್ನು ನಡೆಸುತ್ತಿದೆ. ಹೀಗಿರುವಾಗಲೇ ಮಹತ್ವದ ಟಿ20 ವಿಶ್ವಕಪ್ ಟೂರ್ನಿಗೆ ಯಾರಿಗೆಲ್ಲ ಅವಕಾಶ ನೀಡಬೇಕು ಎನ್ನುವ ಗೊಂದಲಕ್ಕೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸಿಲುಕಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಕೆಲವು ಯುವ ವೇಗಿಗಳು ಸಾಕಷ್ಟು ಉತ್ತಮ ಪ್ರದರ್ಶನ ತೋರುತ್ತಿರುವುದು ಆಯ್ಕೆ ಸಮಿತಿಯ ತಲೆನೋವು ಹೆಚ್ಚುವಂತೆ ಮಾಡಿದೆ. ಹೀಗಿರುವಾಗಲೇ ಮೊಹಮ್ಮದ್ ಶಮಿ ಕುರಿತಂತೆ ಮಾಜಿ ವೇಗಿ ಆಶಿಶ್ ನೆಹ್ರಾ (Ashish Nehra) ಅಚ್ಚರಿಯ ಮಾತುಗಳನ್ನಾಡಿದ್ದಾರೆ
ಈ ಕುರಿತಂತೆ ಮಾತನಾಡಿರುವ ಆಶಿಶ್ ನೆಹ್ರಾ, ಸದ್ಯದ ಮಟ್ಟಿಗೆ ಹೇಳುವುದಾದರೇ, ಮೊಹಮ್ಮದ್ ಶಮಿಯವರು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನಿಸುತ್ತಿದೆ. ಓರ್ವ ಬೌಲರ್ ಆಗಿ ಮೊಹಮ್ಮದ್ ಶಮಿಯವರ ಶಕ್ತಿ-ಸಾಮರ್ಥ್ಯಗಳೇನು ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ. ಅವರು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ದರೂ ಅವರನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯಲಿದ್ದಾರೆ. ಯುವ ವೇಗಿಗಳಿಗೆ ಅವಕಾಶ ಒದಗಿಸುವ ಆಲೋಚನೆಯಿದ್ದರೇ ಖಂಡಿತವಾಗಿಯ 2023ರಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಶಮಿಯವರನ್ನು ಪರಿಗಣಿಸಬಹುದು ಎಂದು ನೆಹ್ರಾ ಹೇಳಿದ್ದಾರೆ.
ಮೊಹಮ್ಮದ್ ಶಮಿ (Mohammed Shami) ಮುಂಬರುವ ಜುಲೈ 01ರಿಂದ 05ರವರೆಗೆ ಇಂಗ್ಲೆಂಡ್ ವಿರುದ್ದ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಆಯೋಜನೆಗೊಂಡಿದ್ದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಕೋವಿಡ್ ಭೀತಿಯಿಂದಾಗಿ ಸ್ಥಗಿತಗೊಂಡಿತ್ತು. 4 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ (Team India) 2-1 ಅಂತರದ ಮುನ್ನಡೆ ಸಾಧಿಸಿದೆ. ಸದ್ಯ ಭಾರತ ತಂಡವು ಆ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದೆ. ಇನ್ನು ಈ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳು 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿವೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಬೇಕಿದ್ದರೇ ಭಾರತ ತಂಡವು ಬಲಿಷ್ಠ ಆಟಗಾರರೊಂದಿಗೆ ಕಣಕ್ಕಿಳಿಯಬೇಕು. ಆ ಬಲಿಷ್ಠ ತಂಡದಲ್ಲಿ ಮೊಹಮ್ಮದ್ ಶಮಿ ಕೂಡಾ ಒಬ್ಬರಾಗಿರಲಿದ್ದಾರೆ ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಉಮ್ರಾನ್ ಮಲಿಕ್ ಪ್ರಬುದ್ಧರಾಗಲು ಮತ್ತಷ್ಟು ಸಮಯ ಬೇಕು ಎಂದ ಟೀಂ ಇಂಡಿಯಾ ವೇಗಿ..!
ಈ ವರ್ಷ ನಾವು ಹೆಚ್ಚು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತಿಲ್ಲ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿ ಬಳಿಕ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಭಾರತ ತಂಡವು ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಬಹುದು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ತಂಡವನ್ನು ಮಣಿಸಬೇಕಿದ್ದರೇ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡದೊಂದಿಗೆ ಕಣಕ್ಕಿಳಿಯಬೇಕು ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವು ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಎರಡನೇ ಬಾರಿಗೆ ಚುಟುಕು ಕ್ರಿಕೆಟ್ ವಿಶ್ವಕಪ್ ಜಯಿಸಲು ಭಾರತ ತಂಡಕ್ಕೆ ಸಾಧ್ಯವಾಗಿಲ್ಲ. ಕಳೆದ ಬಾರಿ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ಟೀಂ ಇಂಡಿಯಾ ವಿಫಲವಾಗಿತ್ತು. ಈ ವರ್ಷವಾದರೂ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
