ನವದೆಹಲಿ(ಸೆ.10): ಕಳೆದ ವರ್ಷ ಎಲ್ಲಾ ವಿಧದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್‌ ಸಿಂಗ್‌ ಈಗ ಮತ್ತೊಮ್ಮೆ ಕ್ರಿಕೆಟ್‌ಗೆ ಮರಳುವ ಉತ್ಸಾಹದಲ್ಲಿದ್ದಾರೆ. ಪಂಜಾಬ್‌ ಪರ ರಣಜಿ ಪಂದ್ಯಗಳನ್ನು ಆಡಲು ತಮಗೆ ಅನುಮತಿ ನೀಡುವಂತೆ ಕೋರಿ ಯುವರಾಜ್‌ ಸಿಂಗ್‌ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಗೆ ಪತ್ರ ಬರೆದಿದ್ದಾರೆ.

2019 ಜೂನ್‌ನಲ್ಲಿ ಕ್ರಿಕೆಟ್‌ನಿಂದ ಯುವರಾಜ್‌ ಸಿಂಗ್‌ ನಿವೃತ್ತಿ ಹೊಂದಿದ್ದರು. ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್‌ ಟಿ-20 ಲೀಗ್‌ ಮತ್ತು ದುಬೈನಲ್ಲಿ ನಡೆದ ಟಿ 10 ಲೀಗ್‌ನಲ್ಲಿ ಯುವರಾಜ್‌ ಸಿಂಗ್‌ ಕಾಣಿಸಿಕೊಂಡಿದ್ದರು. ಯುವರಾಜ್‌ ಸಿಂಗ್‌ ಮತ್ತೊಮ್ಮೆ ಕ್ರಿಕೆಟ್‌ ಮೈದಾನಕ್ಕೆ ಇಳಿಯಲು ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಶನ್‌ ಕಾರ್ಯದರ್ಶಿ ಪುನೀತ್‌ ಬಾಲಿ ಅವರ ಮನವೊಲಿಕೆಯೇ ಕಾರಣ ಎನ್ನಲಾಗಿದೆ. 

ಪಂಜಾಬ್‌ ಕ್ರಿಕೆಟ್‌ ತಂಡವನ್ನು ಹೊಸದಾಗಿ ಕಟ್ಟುವ ಉದ್ದೇಶದಿಂದ ಯುವರಾಜ್‌ ಸಿಂಗ್‌ರನ್ನು ಕ್ರಿಕೆಟ್‌ಗೆ ಕರೆತರುವ ಪ್ರಯತ್ನ ನಡೆದಿದೆ. ಅಲ್ಲದೇ ಯುವ ಆಟಗಾರರಾದ ಶುಬ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಹರಪ್ರೀತ್‌ ಬ್ರಾರ್‌ ಅವರೊಂದಿಗೆ ನೆಟ್‌ ಪ್ರ್ಯಾಕ್ಟೀಸ್‌ನಲ್ಲಿ ಯುವರಾಜ್‌ ಸಿಂಗ್‌ ಪಾಲ್ಗೊಂಡಿದ್ದಾರೆ.

ಯುವಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್: ಮತ್ತೆ ಮೈದಾನಕ್ಕಿಳಿಯಲು ಸಿಕ್ಸರ್‌ ಕಿಂಗ್ ರೆಡಿ..!

ನಾನು ಈ ಯುವಕ್ರಿಕೆಟಿಗರ ಜತೆ ಕಾಲ ಕಳೆದಿದ್ದೇನೆ. ಅವರ ಜತೆ ಕ್ರಿಕೆಟ್‌ನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ನಾನು ಹೇಳಿದ ವಿಚಾರಗಳು ಅವರಿಗೆ ಅರಿವಾಗಿದೆ ಎಂದು ನನಗೆ ಗೊತ್ತಾಯಿತು ಎಂದು ಕ್ರಿಕ್‌ಬಜ್‌ಗೆ ವೆಬ್‌ಸೈಟ್‌ಗೆ ಯುವರಾಜ್ ಸಿಂಗ್ ತಿಳಿಸಿದ್ದಾರೆ. ಇದೇ ವೇಳೆ ತಾವು ನಿವೃತ್ತಿ ಹಿಂಪಡೆದು ದೇಶಿ ಕ್ರಿಕೆಟ್‌ಗೆ ಮರಳುವ ವಿಚಾರವನ್ನು ಖಚಿತಪಡಿಸಿದ್ದಾರೆ. ನಾನು ನೆಟ್ಸ್‌ನಲ್ಲಿ  ಬ್ಯಾಟ್‌ ಹಿಡಿದು ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ. ನಾನು ಸಾಕಷ್ಟು ದಿನಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದರೂ ನನಗೇ ಆಶ್ಚರ್ಯವೆನ್ನುವಂತೆ ಚೆಂಡನ್ನು ಬಾರಿಸಿದೆ. ಅಭ್ಯಾಸ ಪಂದ್ಯದ ವೇಳೆ ನಾನು ಉತ್ತಮವಾಗಿ ಆಡಿದೆ. ಬಳಿಕ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಶನ್‌ ಕಾರ್ಯದರ್ಶಿ ಪುನೀತ್‌ ಬಾಲಿ ನಿಮ್ಮ ಸೇವೆ ತಂಡಕ್ಕೆ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು. ಮೊದಲಿಗೆ ನಾನು ಅವರ ಆಹ್ವಾನವನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರ ಮನವಿಯನ್ನು ತಿರಸ್ಕರಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.