ನವದೆಹಲಿ(ಡಿ.12): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಇಂದು(ಡಿ.12) ತಮ್ಮ 39 ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ತಂದೆ ಯೋಗರಾಜ್ ಸಿಂಗ್ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೀಡಿದ ಹೇಳಿಕೆ ಬಗ್ಗೆ ಯುವಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ತಂದೆಯ ತತ್ವಸಿದ್ದಾಂತ ಹಾಗೂ ತಮ್ಮ ಆಲೋಚನೆ ಒಂದೇ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನದಂದೇ ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ರೈತರು ನಮ್ಮ ದೇಶದ ಜೀವನಾಡಿಗಳಿದ್ದಂತೆ. ಯಾವುದೇ ಸಂಘರ್ಷವಿಲ್ಲದೇ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಈ ಹಿಂದೆ ಯುವಿ ತಂದೆ ಯೋಗರಾಜ್ ಸಿಂಗ್ ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ತಲೆಬಾಗಬೇಕು. ಇದರ ಜತೆಗೆ  ಕ್ರೀಡಾಪಟುಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪ್ರಶಸ್ತಿಗಳನ್ನು ವಾಪಾಸ್ ಮಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ಕೇಂದ್ರ ಸರ್ಕಾರದ ಕೆಲವು ಸಚಿವರು ಹಾಗೂ ಪ್ರಧಾನಿ ಮೋದಿ ಮುಖಗಳು ನಮಗೆ ದೆವ್ವದ ಮುಖಗಳಂತೆ ಬಾಸವಾಗುತ್ತಿವೆ. ಯಾವುದೇ ಭದ್ರತೆಯಿಲ್ಲದೇ ಪ್ರತಿಭಟನೆ ನಡೆಸುತ್ತಿರುವ ರೈತರ ನಡುವೆ ಬಗ್ಗೆ ಆಮೇಲೆ ಪರಿಸ್ಥಿತಿ ಏನಾಗುತ್ತೆ ಎಂದು ನೋಡೋಣ ಎಂದು ಪ್ರಧಾನಿ ಮೋದಿಗೆ ಯೋಗರಾಜ್ ಸಿಂಗ್ ಸವಾಲೆಸೆದಿದ್ದರು.

ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ, ತಮ್ಮ ತಂದೆ ಯೋಗರಾಜ್ ಸಿಂಗ್ ಹೇಳಿಕೆ ನೋವು ಹಾಗೂ ಬೇಸರವನ್ನುಂಟು ಮಾಡಿದೆ. ಈ ಬಗ್ಗೆ ಅವರೇ ಸರಿಯಾದ ಸ್ಪಷ್ಟನೆ ನೀಡಬೇಕಿದೆ. ನನ್ನ ಸಿದ್ದಾಂತಗಳೇ ಬೇರೆ ಅವರ ಸಿದ್ದಾಂತಗಳೇ ಬೇರೆ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪ್ರತಿಯೊಬ್ಬರು ಕೋವಿಡ್ 19 ವಿರುದ್ದದ ಹೋರಾಟದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಯಾಕೆಂದರೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ನಾವೆಲ್ಲಾ ಎಚ್ಚರಿಕೆಯಿಂದ ಇದ್ದರೆ ಕೊರೋನಾ ಸೋಂಕನ್ನು ಸಂಪೂರ್ಣವಾಗಿ ಸೋಲಿಸಬಹುದು ಎಂದು ದೇಶದ ಜನತೆಗೆ ಯುವಿ ಕರೆ ಕೊಟ್ಟಿದ್ದಾರೆ.