ಕ್ಯಾನ್‌ಬೆರ್ರಾ(ಡಿ.05): ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಐಸಿಸಿ ಕನ್ಕಶನ್ ಸಬ್‌ಸ್ಟಿಟ್ಯೂಟ್‌ ನಿಯಮದಂತೆ ರವೀಂದ್ರ ಜಡೇಜಾ ಬದಲಿಗೆ ಬೌಲಿಂಗ್‌ ಮಾಡಲು ಯುಜುವೇಂದ್ರ ಚಹಲ್‌ಗೆ ಅವಕಾಶ ನೀಡಿದ್ದರ ಬಗ್ಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಭಾರತ ಬಳಸಿಕೊಂಡ ಕನ್ಕಶನ್ ನಿಯಮವನ್ನು ಸಮರ್ಥಿಸಿಕೊಂಡಿದ್ದು, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವ ವೇಳೆ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ಜಡ್ಡು ಹೆಲ್ಮೆಟ್‌ಗೆ ಬಡಿದಿತ್ತು. ಹೀಗಿದ್ದು ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಔಪಚಾರಿಕವಾಗಿಯೂ ಜಡೇಜಾಗೆ ಏನಾಗಿದೆ ಎಂದು ಪರೀಕ್ಷೆ ಮಾಡಲಿಲ್ಲ. ಹೀಗಿದ್ದು ಐಸಿಸಿ ಮ್ಯಾಚ್‌ ರೆಫ್ರಿ ಜಡೇಜಾ ಬದಲಿಗೆ ಚಹಲ್‌ಗೆ ಅವಕಾಶ ಮಾಡಿಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಎತ್ತಿದ್ದಾರೆ. ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಯುಜುವೇಂದ್ರ ಚಹಲ್ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ 11 ರನ್‌ಗಳ ರೋಚಕ ಗೆಲುವು ದಾಖಲಿಸಿತ್ತು.

ಕನ್ಕಶನ್‌ ನಿಯಮವನ್ನು ಟೀಂ ಇಂಡಿಯಾ ಸರಿಯಾಗಿಯೇ ಬಳಸಿಕೊಂಡಿದೆ. ಅದರಲ್ಲಿ ತಪ್ಪೇನಿಲ್ಲ. ಐಸಿಸಿ ತಾಂತ್ರಿಕ ಅನುಕೂಲತೆಯನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಬಳಸಿಕೊಂಡಿದೆಯಷ್ಟೇ ಎಂದು ಗವಾಸ್ಕರ್ ಟೀಂ ಇಂಡಿಯಾ ಪರ ಬ್ಯಾಟ್‌ ಬೀಸಿದ್ದಾರೆ.

ಜಡ್ಡು ಬದಲಿಗೆ ಚಹಲ್ ಬೌಲಿಂಗ್ ಮಾಡಿದ್ದೇಕೆ..? ಐಸಿಸಿ ಕನ್ಕಶನ್ ನಿಯಮವೇನು ಹೇಳುತ್ತೆ..?

ಮ್ಯಾಚ್‌ ರೆಫ್ರಿ ಮೂಲತಃ ಆಸ್ಟ್ರೇಲಿಯಾದವರು. ಅಷ್ಟೇ ಅಲ್ಲ ಹಾಲಿ ರೆಫ್ರಿ ಡೇವಿಡ್ ಬೂನ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕೂಡಾ ಹೌದು. ಮ್ಯಾಚ್‌ ರೆಫ್ರಿಯೇ ಒಪ್ಪಿಕೊಂಡಿದ್ದಾರೆ ಅಂದ ಮೇಲೆ ಈ ಕುರಿತಂತೆ ಟೀಕೆ ಟಿಪ್ಪಣಿ ಮಾಡುವುದೇನಿದೆ. ಆಲ್ರೌಂಡರ್ ಆದವರು 1 ರನ್ ಬೇಕಿದ್ದರು ಹೊಡೆಯಬಹುದು ಇಲ್ಲವೇ 100 ರನ್ ಬೇಕಿದ್ದರು ಬಾರಿಸಬಹುದು. ಆಲ್ರೌಂಡರ್ ಬೌಲಿಂಗ್‌ ಕೂಡಾ ಮಾಡುತ್ತಾರೆ. ಹೀಗಾಗಿ ಕನ್ಕಶನ್ ಸಬ್‌ಸ್ಟಿಟ್ಯೂಟ್‌ಗೆ ಆಸ್ಟ್ರೇಲಿಯಾ ಮೂಲದ ರೆಫ್ರಿಯೇ ಒಪ್ಪಿದ ಮೇಲೆ ಬೇರೆಯವರು ಈ ಬಗ್ಗೆ ಗದ್ದಲ ಎಬ್ಬಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ಅಜೇಯ 44 ರನ್ ಬಾರಿಸಿದರೆ, ಕನ್ಕಶನ್ ಆಟಗಾರನಾಗಿ ಕಣಕ್ಕಿಳಿದ ಯುಜುವೇಂದ್ರ ಚಹಲ್ ಕೇವಲ 25 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವಂತೆ ಮಾಡಿದರು.