ಬೆಂಗಳೂರು(ಜ.03): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಿಧಿ ಸಮರ್ಪಣೆ ಅಭಿಯಾನ ಆರಂಭವಾಗಿದೆ. ಇದರ ಭಾಗವಾಗಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದ್ದು, ಈ ಕಾರ್ಯಕ್ಕೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಸಹ ಕೈಜೋಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯೆ ಕ್ಷೇತ್ರೀಯ ಕಾರ್ಯವಾಹರು ಮತ್ತು ಅಭಿಯಾನದ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ ಜಿ ಎಜುಕೇಷನ್‌ ನಾಷನಲ್‌ ಕ್ರಿಕೆಟ್ ಅಕಾಡಮಿಯ ನಿರ್ದೇಶಕರಾಗಿರುವ ಸುಜಿತ್ ಸೋಮಸುಂದರ್ ಮನೆಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ವಿವರವಾಗಿ ತಿಳಿಸಿದರು. ಬಳಿಕ ನಾ.ತಿಪ್ಪೇಸ್ವಾಮಿ ಜಿ ಅವರು ಮಾಜಿ ಕ್ರಿಕೆಟಿಗನಿಂದ ನಿಧಿ ಸಂಗ್ರಹ ಮಾಡಿದರು.

ಈ ಬಗ್ಗೆ ಮಾತನಾಡಿದ ಸುಜಿತ್ ಸೋಮಸುಂದರ್, ರಾಮ ಮಂದಿರ ನಿರ್ಮಾಣ ತುಂಬಾ ಸಂತಸ ತಂದಿದೆ,ದೇಶದಲ್ಲಿ ನವ ಯುಗ ಪ್ರಾರಂಭವಾಗಿದ್ದು ಇದು ಹೀಗೆ ಮುಂದುವರೆಯ ಬೇಕು ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. 

ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!

ಕೆಲವು ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದನ್ನು ಸ್ಮರಿಸಬಹುದಾಗಿದೆ. 

1991ರಲ್ಲಿ ಕರ್ನಾಟಕ ಪರ ರಾಹುಲ್ ದ್ರಾವಿಡ್‌ ಜತೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸುಜಿತ್‌ ಸೋಮಸುಂದರ್, ಭಾರತ ಪರ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 99 ಪಂದ್ಯಗಳನ್ನಾಡಿರ 35.64ರ ಸರಾಸರಿಯಲ್ಲಿ 11 ಶತಕ ಹಾಗೂ 30 ಅರ್ಧಶತಕ ಸಹಿತ 5,525 ರನ್‌ ಬಾರಿಸಿದ್ದಾರೆ.