ಬೇಗ ಓಡಿ..! ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಕಲಿಸಿಕೊಟ್ಟ ಕ್ರಿಕೆಟಿಗ ರಾಹುಲ್ ದ್ರಾವಿಡ್..!
* ಬ್ರಟಿಷ್ ಹೈಕಮಿಷನರ್‌ಗೆ ಕನ್ನಡ ಪಾಠ ಮಾಡಿದ ರಾಹುಲ್ ದ್ರಾವಿಡ್
* ಕನ್ನಡ ಕಲಿಸಿಕೊಟ್ಟ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
* ಕನ್ನಡ ಪದ ಬಳಕೆಯ ಮೂಲಕ ಗಮನ ಸೆಳೆದಿರುವ ಬ್ರಿಟಿಷ್ ಹೈಕಮಿಷನರ್ ಎಲ್ಲಿಸ್
ಬೆಂಗಳೂರು(ಆ.09): ಇತ್ತೀಚಿನ ದಿನಗಳಲ್ಲಿ ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಕನ್ನಡ ಪದಗಳನ್ನು ಟ್ವಿಟರ್‌ನಲ್ಲಿ ಹೆಚ್ಚಾಗಿ ಬಳಸು ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಬ್ರಿಟಿಷ್ ಅಧಿಕಾರಿಗೆ ಕನ್ನಡ ಪದ ಕಲಿಸಿಕೊಟ್ಟಿದ್ದಾರೆ.
ಇನ್ನು ಶನಿವಾರ(ಆ.07) ಬ್ರಿಟಿಷ್ ಹೈಕಮಿಷನರ್ ಕರ್ನಾಟಕದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಎಲ್ಲಿಸ್‌ಗೆ 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕನ್ನಡ ಪಾಠ ಮಾಡಿದ್ದಾರೆ. ಭಾರತೀಯ ಭಾಷೆಗಳಲ್ಲಿ ಕ್ರಿಕೆಟ್ ಅಭಿವ್ಯಕ್ತಿ ಭಾಗ 2. ನಾವೀಗ ದಕ್ಷಿಣ ಭಾರತದ ಬೆಂಗಳೂರಿನಲ್ಲಿದ್ದೇವೆ. ಟೀಚರ್, ಕೋಚ್ ಆಗಿರುವ ರಾಹುಲ್ ದ್ರಾವಿಡ್ ನನಗೆ ಕನ್ನಡ ಹೇಳಿಕೊಟ್ಟಿದ್ದಾರೆ ಎಂದು ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಲಂಕಾ ಮಣಿಸಿದ ಟೀಂ ಇಂಡಿಯಾ: ಡ್ರೆಸ್ಸಿಂಗ್ ರೂಂನಲ್ಲಿ ದ್ರಾವಿಡ್ ಆಡಿದ ಮಾತುಗಳಿವು!
ಕ್ರಿಕೆಟ್‌ನಲ್ಲಿ ಕನ್ನಡದ ಒಂದು ಸಾಲನ್ನು ಕಲಿಸಿಕೊಡಿ ಎಂದು ರಾಹುಲ್ ದ್ರಾವಿಡ್ ಬಳಿಕ ಎಲ್ಲಿಸ್ ಕೇಳಿಕೊಂಡಿದ್ದಾರೆ. ಆಗ ದ್ರಾವಿಡ್ 'ಬೇಗ ಓಡಿ' ಎಂದಿದ್ದಾರೆ. ತಕ್ಷಣ ಪ್ರತಿಕ್ರಿಯೆ ಕೊಟ್ಟ ಎಲ್ಲಿಸ್, 'ಬೇಗ ಓಡಿ, ಒಂದು ರನ್' ಎನ್ನುವ ಮೂಲಕ ನಗು ಬೀರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲಿಸ್ ಕನ್ನಡಿಗರ ಮನ ಗೆಲ್ಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಸದ್ಯ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, 7 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಬೆಂಗಳೂರು ಸಕ್ಕತ್ ಆಗಿದೆ ಎಂದು ಟ್ವೀಟ್ ಮಾಡಿದ್ದ ಅಲೆಕ್ಸ್ ಎಲ್ಲಿಸ್ ಬಳಿಕ ಮಸಾಲೆ ದೋಸೆ ಬೊಂಬಾಟ್ ಗುರು ಎಂದು ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಇನ್ನು ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡುವಾಗಲೂ ನಮಸ್ಕಾರ ಮುಖ್ಯಮಂತ್ರಿ ಅವರೆ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಈ ರೀತಿ ಕನ್ನಡ ಪದ ಬಳಸಿದ್ದಕ್ಕೆ ಕನ್ನಡಿಗರು ಮೆಚ್ಚಿಕೊಂಡಿದ್ದಲ್ಲದೇ ಹಿಂದಿಯ ಜೀ ಬಳಕೆ ಮಾಡುವವರು ಒಮ್ಮೆ ಇತ್ತ ನೋಡಿ ಎಂದೆಲ್ಲಾ ಜೀ ಸಂಸ್ಕೃತಿ ಬಳಸುವವರ ಕಿವಿ ಹಿಂಡಿದ್ದರು.
ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಹಾಗೂ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ನಡುವಿನ ಈ ಸಂಭಾಷಣೆ ಕನ್ನಡಿಗರ ಹೃದಯ ಕದ್ದಿದ್ದಂತೂ ಸುಳ್ಳಲ್ಲ. ಹೀಗೆ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಿಕೊಡುವ ಮೂಲಕ ನಾಡಿನ ಭಾಷೆಯನ್ನು ಬೆಳೆಸೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.