ನವದೆಹಲಿ[ಜ.06]: ಭಾರತ ವಿಶ್ವಕ್ರಿಕೆಟ್’ಗೆ ಪರಿಚಯಿಸಿದ ಶ್ರೇಷ್ಠ ಆಲ್ರೌಂಡರ್, ಟೀಂ ಇಂಡಿಯಾಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ 61ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹರಿಯಾಣ ಹರಿಕೇನ್ ಖ್ಯಾತಿಯ ಕಪಿಲ್
ದೇವ್’ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

ಸತತ ಎರಡು ವಿಶ್ವಕಪ್ ಗೆದ್ದು ಮೂರನೇ ಕಪ್ ಗೆಲ್ಲುವ ಕನವರಿಕೆಯಲ್ಲಿದ್ದ ಕೆರಿಬಿಯನ್ನರನ್ನು ಮಣಿಸಿ 1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ದೇವ್ ಪಡೆ ಯಶಸ್ವಿಯಾಗಿತ್ತು. ಈ ಮೂಲಕ ದೈತ್ಯ ಸಂಹಾರ ಮಾಡಿದ ಕಪಿಲ್ ಡೆವಿಲ್ಸ್
ಪಡೆ ಕೋಟ್ಯಾಂತರ ಭಾರತೀಯರ ಕನಸನ್ನು ನನಸು ಮಾಡಿತ್ತು.

ಜನವರಿ 6, 1959ರಲ್ಲಿ ಚಂಡೀಘಡದಲ್ಲಿ ಜನಿಸಿದ ಕಪಿಲ್ ದೇವ್, 1983ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ನಾಯಕನಾಗಿ ಪ್ರಮುಖ ಪಾತ್ರವಹಿಸಿದ್ದರು. ಕಪಿಲ್ ದೇವ್ ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕೆ ಏಕಾಂಗಿಯಾಗಿ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿಟ್ಟಿದ್ದಾರೆ.

131 ಟೆಸ್ಟ್ ಪಂದ್ಯಗಳನ್ನಾಡಿದ್ದ ಕಪಿಲ್ ದೇವ್ 8 ಶತಕ ಹಾಗೂ 27 ಅರ್ಧಶತಕಗಳ ನೆರವಿನಿಂದ 5248 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್’ನಲ್ಲಿ 434 ವಿಕೆಟ್ ಕಬಳಿಸಿದ್ದಾರೆ. ಇನ್ನು 225 ಪಂದ್ಯಗಳನ್ನಾಡಿರುವ ಕಪಿಲ್, 1 ಶತಕ ಹಾಗೂ 14 ಅರ್ಧಶತಕಗಳ ಸಹಿತ 3,783 ರನ್ ಬಾರಿಸಿದ್ದಾರೆ. ಬೌಲಿಂಗ್’ನಲ್ಲಿ 253 ವಿಕೆಟ್ ಪಡೆದಿದ್ದಾರೆ.

ಕಪಿಲ್ ದೇವ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ ರಣ್ವೀರ್ ಸಿಂಗ್, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭ ಕೋರಿದ್ದಾರೆ.