ಅಭಿರಾಮ್ ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕ..!
ಕೆಎಸ್‌ಸಿಎ ಯ ಪ್ರಧಾನ ಆಯ್ಕೆಗಾರರಾಗಿ ಜೆ.ಅಭಿರಾಮ್ ನೇಮಕ
ಫಜಲ್ ಖಲೀಲ್‌ರಿಂದ ತೆರವುಗೊಂಡಿದ್ದ ಸ್ಥಾನವನ್ನು ತುಂಬಲಿರುವ ಅಭಿರಾಮ್
ಅಭಿರಾಮ್ ಈ ಹಿಂದೆಯೂ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು
ಬೆಂಗಳೂರು(ಆ.05): ಮಾಜಿ ಕ್ರಿಕೆಟಿಗ ಜೆ.ಅಭಿರಾಮ್ 2023-24ರ ಋತುವಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಪ್ರಧಾನ ಆಯ್ಕೆಗಾರರಾಗಿ ನೇಮಕಗೊಂಡಿದ್ದಾರೆ. 63 ವರ್ಷದ ಅಭಿರಾಮ್, ಫಜಲ್ ಖಲೀಲ್‌ರಿಂದ ತೆರವುಗೊಂಡಿದ್ದ ಸ್ಥಾನವನ್ನು ತುಂಬಲಿದ್ದಾರೆ. ಅಭಿರಾಮ್ ಈ ಹಿಂದೆಯೂ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಕೆಎಸ್‌ಸಿಎ ಶುಕ್ರವಾರ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದ್ದು, ಪುರುಷರ ತಂಡಗಳ ಆಯ್ಕೆಗೆ ಕಳೆದ ವರ್ಷ ಇದ್ದ 4 ವಿವಿಧ ಸಮಿತಿಗಳ ಬದಲು ಕೇವಲ 2 ಸಮಿತಿಗಳನ್ನು ನೇಮಿಸಿದೆ.
ಅಭಿರಾಮ್ ಹಿರಿಯ ಹಾಗೂ ಕಿರಿಯ ಎರಡೂ ತಂಡಗಳ ಆಯ್ಕೆ ಸಮಿತಿಗಳಿಗೆ ಮುಖ್ಯಸ್ಥರಾಗಿದ್ದಾರೆ. ಹಿರಿಯ ಮಹಿಳೆಯರ ಆಯ್ಕೆ ಸಮಿತಿ ಮುಖ್ಯಸ್ಥೆಯಾಗಿ ಮಾಜಿ ಸ್ಪಿನ್ನರ್ ಸುನಿತಾ ಅನಂತಕೃಷ್ಣನ್, ಕಿರಿಯ ಮಹಿಳೆಯರ ಆಯ್ಕೆ ಸಮಿತಿ ಮುಖ್ಯಸ್ಥೆಯಾಗಿ ಶರ್ಮಿಳಾ ಎಸ್ ನೇಮಕಗೊಂಡಿದ್ದಾರೆ.
ಕೆರಿಬಿಯನ್ ನಾಡಿಂದ ಚಾರ್ಟರ್ ಫ್ಲೈಟ್‌ನಲ್ಲಿ ಭಾರತಕ್ಕೆ ಬಂದಿಳಿದ ಕೊಹ್ಲಿ..! ಅದನ್ನೂ ಟ್ರೋಲ್ ಮಾಡಿದ ಫ್ಯಾನ್ಸ್..!
ಆಯ್ಕೆ ಸಮಿತಿಗಳ ವಿವರ
ಪುರುಷರ ಹಿರಿಯ ಹಾಗೂ ಅಂಡರ್-23- ಮುಖ್ಯಸ್ಥ: ಜೆ.ಅಭಿರಾಮ್. ಸದಸ್ಯರು: ಕೆ.ಎಲ್.ಅಶ್ವತ್ಥ್, ಸಿ.ರಘು, ಕಮಲ್ ಥಂಡನ್. ಅಂಡರ್ 19 ಹಾಗೂ ಅಂಡರ್ 16 - ಮುಖ್ಯಸ್ಥ: ಜೆ.ಅಭಿರಾಮ್. ಸದಸ್ಯರು: ಎಂ.ವಿ.ಪ್ರಶಾಂತ್, ಉದಿತ್ ಪಟೇಲ್, ಕೆ.ಎಂ.ಅಯ್ಯಪ್ಪ, ರಘೋತ್ತಮ್.
ಹಿರಿಯ ಮಹಿಳೆಯರ ತಂಡ- ಮುಖ್ಯಸ್ಥೆ: ಸುನಿತಾ ಅನಂತಕೃಷ್ಣನ್. ಸದಸ್ಯೆಯರು: ಅರುಣಾ ರೆಡ್ಡಿ, ಡಾ.ನಿವೇದಿತಾ ರೇಶ್ಮೆ, ಮುಕ್ತಾ ಅಲ್ಗೇರಿ.
ಕಿರಿಯ ಮಹಿಳೆಯರ ತಂಡ- ಮುಖ್ಯಸ್ಥೆ: ಶರ್ಮಿಳಾ ಎಸ್. ಸದಸ್ಯೆಯರು: ರಜಿನಿ ಕುಮಾರ್, ಸಬಾ ಸಿದ್ಧಿಕ್ಕಿ, ಮೀನಾ ಕುಮಾರಿ.
ಭಾರತ ಅಂಧ ಕ್ರಿಕೆಟ್ ತಂಡದ ಜೆರ್ಸಿ ಬಿಡುಗಡೆ
ಬೆಂಗಳೂರು: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ವಿಶ್ವ ಅಂಧರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತ ಪುರುಷ, ಮಹಿಳಾ ಕ್ರಿಕೆಟ್ ತಂಡಗಳ ನಾಯಕರ ಘೋಷಣೆ ಹಾಗೂ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಭಾರತ ಅಂಧರ ಕ್ರಿಕೆಟ್ ಮಂಡಳಿ ಅಧ್ಯಕ್ಷ ಡಾ.ಮಹಾಂತೇಶ್, ಭಾರತ ಪುರುಷ ತಂಡದ ನಾಯಕ ಅಜಯ್ ರೆಡ್ಡಿ, ಮಹಿಳಾ ತಂಡದ ನಾಯಕಿ, ಕರ್ನಾಟಕದ ವರ್ಷಾ ಸೇರಿ ಹಲವರಿದ್ದರು.
ವಿಶ್ವಕಪ್‌ಗೆ ಕ್ಷಣಗಣನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ..!
ನಿಧಾನಗತಿ ಬೌಲಿಂಗ್: ಭಾರತ, ವಿಂಡೀಸ್‌ಗೆ ದಂಡ
ದುಬೈ: ಮೊದಲ ಟಿ20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ ಕಾರಣ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳಿಗೆ ಐಸಿಸಿ ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ. ನಿಗದಿತ ಸಮಯದಲ್ಲಿ ಒಂದು ಓವರ್ ಹಿಂದಿದ್ದ ಕಾರಣ ಭಾರತೀಯ ಆಟಗಾರರಿಗೆ ಪಂದ್ಯದ ಸಂಭಾವನೆಯ ತಲಾ ಶೇ.5ರಷ್ಟು, 2 ಓವರ್ ಹಿಂದಿದ್ದ ಕಾರಣ ವಿಂಡೀಸ್ ಆಟಗಾರರಿಗೆ ತಲಾ ಶೇ.10ರಷ್ಟು ದಂಡ ಹಾಕಲಾಗಿದೆ.