* ಐರ್ಲೆಂಡ್ ಎದುರಿನ 2 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ* ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರಾಹುಲ್ ತ್ರಿಪಾಠಿ* ರಾಹುಲ್ ತ್ರಿಪಾಠಿ ಆಯ್ಕೆಯನ್ನು ಸಮರ್ಥಿಸಿಕೊಂಡ ಮಾಜಿ ಕ್ರಿಕೆಟಿಗರು
ಮುಂಬೈ(ಜೂ.16): ಸದ್ಯ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಇದಾದ ಬಳಿಕ ಭಾರತ ಕ್ರಿಕೆಟ್ ತಂಡವು ಈ ತಿಂಗಳಾಂತ್ಯದಲ್ಲಿ 2 ಪಂದ್ಯಗಳ ಟಿ20 ಸರಣಿಯನ್ನಾಡಲು ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗೆ ಬುಧವಾರ(ಜೂ.15) ಬಿಸಿಸಿಐ 17 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಮೊದಲ ಬಾರಿಗೆ ಭಾರತ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ನೀಡಲಾಗಿದ್ದು, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ನುಳಿದಂತೆ ಐರ್ಲೆಂಡ್ ಪ್ರವಾಸಕ್ಕೆ ಸ್ಥಾನ ಪಡೆದ ಆಟಗಾರರ ಪೈಕಿ ಗಾಯಗೊಂಡು ಚೇತರಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಪ್ರಮುಖರೆನಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ರಾಹುಲ್ ತ್ರಿಪಾಠಿ ಇದೇ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 31 ವರ್ಷದ ಬ್ಯಾಟರ್ ರಾಹುಲ್ ತ್ರಿಪಾಠಿ (Rahul Tripathi) 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 14 ಪಂದ್ಯಗಳನ್ನಾಡಿ 158.24ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ 413 ರನ್ ಸಿಡಿಸಿದ್ದರು. ಇದೀಗ ತ್ರಿಪಾಠಿ, ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೇ ಜೂನ್ 26 ಹಾಗೂ 28ರಂದು ನಡೆಯಲಿರುವ ಎರಡು ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಇನ್ನು ರಾಹುಲ್ ತ್ರಿಪಾಠಿ ಅವರಿಗೆ ಟೀಂ ಇಂಡಿಯಾದಲ್ಲಿ (Team India) ಸ್ಥಾನ ನೀಡಿರುವುದಕ್ಕೆ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ (Irfan Pathan), ಇಯಾನ್ ಬಿಷಪ್ ಸಂತಸ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ, ಭಾರತ ತಂಡದಲ್ಲಿ ರಾಹುಲ್ ತ್ರಿಪಾಠಿ ಹೆಸರಿರುವುದನ್ನು ನೋಡು ತುಂಬಾ ಖುಷಿ ಎನಿಸುತ್ತಿದೆ. ಅಭಿನಂದನೆಗಳು ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಇಯಾನ್ ಬಿಷಪ್, ರಾಹುಲ್ ತ್ರಿಪಾಠಿ ಹಾಗೂ ಸಂಜು ಸ್ಯಾಮ್ಸನ್ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ರಾಹುಲ್ ತ್ರಿಪಾಠಿ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತೋಷವಾಗುತ್ತಿದೆ. ಅವರು ಅರ್ಹ ವ್ಯಕ್ತಿ. ಇನ್ನು ಸಂಜು ಸ್ಯಾಮ್ಸನ್ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ. ಆತನ ಬ್ಯಾಟಿಂಗ್‌ನಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು ಇಯಾನ್ ಬಿಷಪ್ ಟ್ವೀಟ್ ಮಾಡಿದ್ದಾರೆ.
ಚೊಚ್ಚಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ..!
ರಾಹುಲ್ ತ್ರಿಪಾಠಿ ದೇಶಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ತ್ರಿಪಾಠಿ 2017ರಿಂದಲೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತ್ರಿಪಾಠಿ ತಮ್ಮ ಚೊಚ್ಚಲ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಪುಣೆ ಸೂಪರ್‌ಜೈಂಟ್ಸ್ ಪರ ರಾಹುಲ್ ತ್ರಿಪಾಠಿ 146.44ರ ಸ್ಟ್ರೈಕ್‌ರೇಟ್‌ನಲ್ಲಿ 393 ರನ್ ಸಿಡಿಸಿದ್ದರು. ಪುಣೆ ಪರ ಉತ್ತಮ ಪ್ರದರ್ಶನದ ಹೊರತಾಗಿಯೂ 2018 ಹಾಗೂ 2019ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರ್ಪಡೆಗೊಂಡಿದ್ದ ತ್ರಿಪಾಠಿಗೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ. ಇನ್ನು 2020ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಕೂಡಿಕೊಂಡ ಬಳಿಕ ತ್ರಿಪಾಠಿ ಐಪಿಎಲ್ ಕ್ರಿಕೆಟ್ ಬದುಕಿಗೆ ಹೊಸ ತಿರುವು ದೊರೆಯಿತು. 2021ರ ಐಪಿಎಲ್‌ನಲ್ಲಿ ತ್ರಿಪಾಠಿ 17 ಪಂದ್ಯಗಳನ್ನಾಡಿ 140ರ ಸ್ಟ್ರೈಕ್‌ರೇಟ್‌ನಲ್ಲಿ 397 ರನ್ ಚಚ್ಚಿದ್ದರು.
