* ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್‌ ಕುಟುಂಬಕ್ಕೆ ಗುಡ್‌ ನ್ಯೂಸ್* ಗಂಡು ಮಗುವಿಗೆ ತಂದೆಯಾದ ಇರ್ಫಾನ್ ಪಠಾಣ್* ಟ್ವೀಟ್‌ ಮೂಲಕ ಖುಷಿಯ ವಿಚಾರ ಹಂಚಿಕೊಂಡ ಮಾಜಿ ಕ್ರಿಕೆಟಿಗ

ನವದೆಹಲಿ(ಡಿ.29): ಟೀಂ ಇಂಡಿಯಾ(Team India) ಮಾಜಿ ಆಲ್ರೌಂಡರ್ ಇರ್ಫಾನ್‌ ಪಠಾಣ್(Irfan Pathan) ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಬೇಗ್‌(Safa Baig) ಮಂಗಳವಾರ(ಡಿಸೆಂಬರ್ 28) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣವಾದ ಟ್ವೀಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಈ ಖುಷಿಯ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಜತೆಗೆ ಮುದ್ದಾದ ಮಗುವಿಗೆ ಹೆಸರನ್ನು ಸಹ ಇಡಲಾಗಿದೆ.

37 ವರ್ಷದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ತಮ್ಮ ಮುದ್ದಾದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಫೋಸ್‌ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಕ್ರಿಕೆಟಿಗ ಸದ್ಯ ಹಾಲಿ ವೀಕ್ಷಕ ವಿವರಣೆಗಾರಿಕೆ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿರುವ ಇರ್ಫಾನ್ ಪಠಾಣ್, ತಾಯಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ ಎಂದು ಖಚಿತಪಡಿಸಿದ್ದಾರೆ. ಇದಷ್ಟೇ ಅಲ್ಲದೇ ಎರಡನೇ ಮಗುವಿಗೆ ಹೆಸರನ್ನು ಇಟ್ಟಿರುವುದಾಗಿಯೂ ಘೋಷಿಸಿದ್ದಾರೆ 

ನಾನು ಮತ್ತು ಸಫಾ ಇಂದು ಗಂಡು ಮಗುವಾದ ಸುಲೈಮಾನ್ ಖಾನ್‌ನನ್ನು ಸ್ವಾಗತಿಸಿದೆವು. ತಾಯಿ ಮತ್ತು ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಇರ್ಫಾನ್ ಪಠಾಣ್‌ ಮಗುವಿನ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Scroll to load tweet…

ಈ ಮೊದಲು ಇರ್ಫಾನ್ ಪಠಾಣ್ ಹಾಗೂ ಸಫಾ ಬೇಗ್ ದಂಪತಿಯು 2016ರ ಡಿಸೆಂಬರ್ 20ರಂದು ಮೊದಲ ಮಗುವನ್ನು ಸ್ವಾಗತಿಸಿದ್ದರು. ಈ ದಂಪತಿಯು ಮೊದಲ ಮಗುವಿಗೆ ಇಮ್ರಾನ್ ಖಾನ್ ಪಠಾಣ್ ಎಂದು ಹೆಸರಿಟ್ಟಿದ್ದರು. 

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಇರ್ಫಾನ್ ಪಠಾಣ್ ಸಹೋದರ ಯೂಸುಫ್ ಪಠಾಣ್(Yusuf Pathan) ಕೂಡಾ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮದ ಕುರಿತಂತೆ ಹರ್ಷ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮಗುವಿನ ಜನನವಾದಾಗ ಅಂದೊಂದು ಬೇರೆಯದ್ದೇ ರೀತಿಯ ಸಂತಸ ಹಾಗೂ ಸಂಭ್ರಮವನ್ನುಂಟು ಮಾಡುತ್ತದೆ. ಪಠಾಣ್ ಕುಟುಂಬಕ್ಕೆ ಸುಲೈಮಾನ್‌ಗೆ ಸ್ವಾಗತ. ಅಯಾನ್, ರಿಯಾನ್‌ ಮತ್ತು ಇಮ್ರಾನ್‌ ಅವರ ಮಕ್ಕಳ ಸಾಮ್ರಾಜ್ಯಕ್ಕೆ ಹೊಸ ಪಾರ್ಟ್ನರ್ ಸೇರ್ಪಡೆಯಾಗಿದ್ದಾರೆ ಎಂದು ಯೂಸುಫ್ ಪಠಾಣ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

Scroll to load tweet…

ಇರ್ಫಾನ್ ಪಠಾಣ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನ ಬಗ್ಗೆ ಕಣ್ಣಾಡಿಸುವುದಾದರೆ..

2003ರ ಡಿಸೆಂಬರ್‌ನಲ್ಲಿ ಎಡಗೈ ವೇಗಿಯಾಗಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಇರ್ಫಾನ್ ಪಠಾಣ್, ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡಿ ಗಮನ ಸೆಳೆದಿದ್ದರು. ಕೇವಲ ಬೌಲಿಂಗ್ ಮಾತ್ರವಲ್ಲದೇ ಹಲವಾರು ಬಾರಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿ ಮಿಂಚಿದ್ದಾರೆ. ಪ್ರತಿಭಾನ್ವಿತ ಕ್ರಿಕೆಟಿಗ ಇರ್ಫಾನ್ ಪಠಾಣ್, ಭಾರತ ಪರ 29 ಟೆಸ್ಟ್ ಪಂದ್ಯಗಳನ್ನಾಡಿ 100 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಒಂದು ಶತಕ ಹಾಗೂ 6 ಅರ್ಧಶತಕ ಸಹಿತ 1,105 ರನ್ ಬಾರಿಸಿದ್ದಾರೆ.

Mohammad Shami 200 Wickets Club: ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ..!

ಇರ್ಫಾನ್ ಪಠಾಣ್ ಭಾರತ ಪರ 120 ಏಕದಿನ ಪಂದ್ಯಗಳಿಂದ 1,544 ರನ್ ಹಾಗೂ 24 ಟಿ20 ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ. ಇನ್ನು 2007ರ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಇರ್ಫಾನ್ ಪಠಾಣ್ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.