Asianet Suvarna News Asianet Suvarna News

ದ್ರಾವಿಡ್‌ಗಿಂತ ಈತನಿಗೆ ಟಿ20 ಮಾದರಿ ಚೆನ್ನಾಗಿ ಗೊತ್ತು: ಟೀಂ ಇಂಡಿಯಾ ಹೆಡ್ ಕೋಚ್ ಬಗ್ಗೆ ಭಜ್ಜಿ ಅಚ್ಚರಿಯ ಹೇಳಿಕೆ

ಐಸಿಸಿ ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕೋಚ್ ಸಿಬ್ಬಂದಿ ಬದಲಿಗೆ ಆಗ್ರಹ
ರಾಹುಲ್ ದ್ರಾವಿಡ್ ಜತೆ ಆಶಿಶ್ ನೆಹ್ರಾಗೂ ಅವಕಾಶ ಕಲ್ಪಿಸಲು ಹರ್ಭಜನ್ ಸಿಂಗ್ ಸಲಹೆ
ಆಶಿಶ್ ನೆಹ್ರಾ ಮಾರ್ಗದರ್ಶನದಲ್ಲಿ ಐಪಿಎಲ್ ಟ್ರೋಫಿ ಗೆದ್ದ ಗುಜರಾತ್ ಟೈಟಾನ್ಸ್

Former Cricketer Harbhajan Singh backs Ashish Nehra inclusion in Team India coaching staff kvn
Author
First Published Nov 25, 2022, 12:41 PM IST

ನವದೆಹಲಿ(ನ.25): ಭಾರತ ಕ್ರಿಕೆಟ್ ತಂಡದ ಕೋಚ್ ಸಿಬ್ಬಂದಿ ವಿಚಾರದಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಬೇಕೆಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತೊಮ್ಮೆ ಅಭಿಪ್ರಾಯಪಟ್ಟಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಟಿ20 ತಂಡಕ್ಕೆ ಹೊಸ ಕೋಚ್ ನೇಮಿಸಬೇಕೆಂದು ಹರ್ಭಜನ್ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ದ್ರಾವಿಡ್ ಅವರ ಮೇಲೆ ಗೌರವ ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ. ಅವರಿಗಿಂತ ಆಶಿಶ್ ನೆಹ್ರಾಗೆ ಈ ಮಾದರಿಯ ಬಗ್ಗೆ ಹೆಚ್ಚು ಅನುಭವವಿದೆ. ರಾಹುಲ್ ದ್ರಾವಿಡ್ ಹಾಗೂ ಆಶಿಶ್ ನೆಹ್ರಾ ಒಟ್ಟಾಗಿಯೇ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಅವರು ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ. ಆದರೆ ಟಿ20 ಕ್ರಿಕೆಟ್ ಎನ್ನುವುದು ಒಂದು ರೀತಿ ಸವಾಲಿನ ಮಾದರಿ. ಇತ್ತೀಚೆಗೆ ಕ್ರಿಕೆಟ್ ಆಡಿ ನಿವೃತ್ತಿಯಾದವರು, ಈ ಮಾದರಿಯ ಕ್ರಿಕೆಟ್‌ಗೆ ಹೆಡ್ ಕೋಚ್ ಆಗಲು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ನಾನು ಟಿ20 ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತೆಗೆದುಹಾಕಿ ಎಂದು ಹೇಳುತ್ತಿಲ್ಲ. ರಾಹುಲ್ ದ್ರಾವಿಡ್ ಹಾಗೂ ಆಶಿಶ್ ನೆಹ್ರಾ ಒಟ್ಟಾಗಿಯೇ ಕೆಲಸ ಮಾಡಿ 2024ರ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ತಂಡ ಕಟ್ಟಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ದ್ರಾವಿಡ್ ಕೆಲ ಸರಣಿಗಳಿಂದ ಹೊರಗುಳಿಯುವುದರಿಂದ ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಾ ಇವೆ. ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಕೋಚ್ ಸಿಬ್ಬಂದಿಗಳ ಜತೆ ಆಶಿಶ್ ನೆಹ್ರಾ ಸೇರ್ಪಡೆ ತಂಡಕ್ಕೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡು ಮಾದರಿಯ ಕ್ರಿಕೆಟ್‌ಗೆ ಕೋಚ್‌ಗಳು ಹಂಚಿಕೆಯಾಗುವುದರಿಂದ ರಾಹುಲ್ ದ್ರಾವಿಡ್ ಅವರಿಗೂ ಅನುಕೂಲವಾಗಲಿದೆ. ಅವರು ಅಗತ್ಯ ಸಂದರ್ಭದಲ್ಲಿ ಬ್ರೇಕ್ ತೆಗೆದುಕೊಳ್ಳಬಹುದು. ನ್ಯೂಜಿಲೆಂಡ್ ಸರಣಿಯಲ್ಲಿ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದಾಗ ಆಶಿಶ್ ನೆಹ್ರಾ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಬಹುದು ಎಂದು ಭಜ್ಜಿ ಹೇಳಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ, ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಹೆಡ್ ಕೋಚ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಇದರ ಜತೆಗೆ ಐಪಿಎಲ್ ಟ್ರೋಫಿ ಗೆದ್ದ ಭಾರತದ ಮೊದಲ ಹಾಗೂ ಏಕೈಕ ಕೋಚ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಇದೀಗ ಟಿ20 ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆಶಿಶ್ ನೆಹ್ರಾ ಜೋಡಿ ಬಲಿಷ್ಠ ತಂಡ ಕಟ್ಟಲು ಭಜ್ಜಿ ಸಲಹೆ ನೆರವಿಗೆ ಬರಬಹುದು ಎನ್ನುವುದು ಹಲವು ಕ್ರೀಡಾಪಂಡಿತರ ಲೆಕ್ಕಾಚಾರವಾಗಿದೆ.  

Ind vs Ban: ಭಾರತ ಎದುರಿನ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ, ಸ್ಟಾರ್ ಆಲ್ರೌಂಡರ್‌ಗೆ ಸ್ಥಾನ..!

ಆಶಿಶ್ ನೆಹ್ರಾ 2017ರವರೆಗೂ ಭಾರತ ಕ್ರಿಕೆಟ್ ತಂಡದ ಪರ ಕಣಕ್ಕಿಳಿದಿದ್ದರು. ಇದಷ್ಟೇ ಅಲ್ಲದೇ 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ಟಿ20 ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ನೆಹ್ರಾಗೆ ಟೀಂ ಇಂಡಿಯಾ ಟಿ20 ತಂಡದ ಹೆಡ್ ಕೋಚ್ ಪಟ್ಟ ಕಟ್ಟಲಿ ಎನ್ನುವುದು ಹರ್ಭಜನ್ ಸಿಂಗ್‌ ಆಗ್ರಹವಾಗಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬೆನ್ನಲ್ಲೇ ಚುಟುಕು ಕ್ರಿಕೆಟ್‌ಗೆ ಹೊಸ ನಾಯಕ ಹಾಗೂ ಹೊಸ ಕೋಚ್ ನೇಮಕವಾಗಲಿ ಎನ್ನುವ ಆಗ್ರಹ ಜೋರಾಗುತ್ತಿದೆ.

Follow Us:
Download App:
  • android
  • ios