10 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಿಲೀಸ್ ಮಾಡಿರುವುದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.21): 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಆಟಗಾರರನ್ನು ರಿಲೀಸ್ ಮಾಡಿದ್ದು, ಬೆಂಗಳೂರು ಮೂಲದ ಫ್ರಾಂಚೈಸಿಯ ಈ ನಡೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.
ಕ್ರಿಕೆಟ್ ಆಪರೇಷನ್ ಡೈರೆಕ್ಟರ್ ಮೈಕ್ ಹೆಸನ್ ಹಾಗೂ ಆರ್‌ಸಿಬಿ ಹೆಡ್ ಕೋಚ್ ಸೈಮನ್ ಕ್ಯಾಟಿಚ್ ಅವರನ್ನು ರಿಲೀಸ್ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೇವಲ 12 ಆಟಗಾರರನ್ನು ರೀಟೈನ್ ಮಾಡಿಕೊಂಡು 10 ಆಟಗಾರರಿಗೆ ಗೇಟ್‌ಪಾಸ್ ನೀಡಿತ್ತು.
ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಭೀರ್‌ಗೆ ಕ್ರಿಸ್ ಮೋರಿಸ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಾದ ನಿರ್ಧಾರವೇ ಎನ್ನುವ ಪ್ರಶ್ನೆಗೆ ಸದ್ಯದ ಪರಿಸ್ಥಿತಿಯಲ್ಲಿ ಮೋರಿಸ್ ಅವರಂತಹ ಆಟಗಾರರು ಸಿಗುವುದು ವಿರಳ. ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರನ್ನು ಯಾವ ಫ್ರಾಂಚೈಸಿಯು ಬಿಟ್ಟುಕೊಡಲು ಮನಸು ಮಾಡುವುದಿಲ್ಲ. ಇನ್ನೊಂದು ವರ್ಷ ಮೋರಿಸ್‌ಗೆ ಆರ್‌ಸಿಬಿ ತಂಡಕ್ಕೆ ಅವಕಾಶ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನನ್ನು ಕೈಬಿಟ್ಟಿದ್ದಕ್ಕೆ ಥ್ಯಾಂಕ್ಯೂ: ಆರ್‌ಸಿಬಿ ಕಾಲೆಳೆದ ಪಾರ್ಥಿವ್ ಪಟೇಲ್..!
ಬೆಂಗಳೂರು ಮೂಲದ ಫ್ರಾಂಚೈಸಿಯ ಈ ಹಿಂದಿನ ರೆಕಾರ್ಡ್‌ಗಳನ್ನು ಗಮನಿಸಿದರೆ ಮೈಕ್ ಹೆಸನ್ ಹಾಗೂ ಸೈಮನ್ ಕ್ಯಾಟಿಚ್ ಅವರು ತಮ್ಮ ಹುದ್ದೆ ಉಳಿಸಿಕೊಂಡಿದ್ದೇ ಅವರ ಅದೃಷ್ಟ ಎಂದು ಗೌತಮ್ ಗಂಭೀರ್ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸುವುದು ಒಳ್ಳೆಯ ಆಯ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
