ಬೆಂಗಳೂರು(ಜು.25): ಭಾರತದ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ಗೆ ದೇಶದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. 

ಟ್ವೀಟರ್‌ನಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌ ಕೂಡ ಧ್ವನಿ ಎತ್ತಿದ್ದಾರೆ. ಶ್ರೀನಾಥ್‌ಗೆ ಪದ್ಮಶ್ರೀ ಗೌರವ ನೀಡಲು ಕೇಂದ್ರ ಸರ್ಕಾರ ಶಿಫಾರಸು ಮಾಡಬೇಕು ಎಂದು ದೊಡ್ಡ ಗಣೇಶ್‌ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಗಣೇಶ್‌, ದಯವಿಟ್ಟು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಶ್ರೀನಾಥ್‌ರನ್ನು ಶಿಫಾರಸುಗೊಳಿಸಿ, ಇದಕ್ಕೆ ನಿಜವಾಗಿಯೂ ಅವರು ಅರ್ಹರಾಗಿದ್ದಾರೆ ಎಂದಿದ್ದಾರೆ. ಶ್ರೀನಾಥ್‌ 13 ವರ್ಷ ಭಾರತ ತಂಡದಲ್ಲಿ ಅದ್ಭುತ ಸಾಧನೆ ಮಾಡಿದ್ದರೂ, ಯಾವುದೇ ಪ್ರತಿಷ್ಠಿತ ಗೌರವ ಪಡೆದಿಲ್ಲ.

ಜಾವಗಲ್ ಶ್ರೀನಾಥ್‌ಗೆ ಸಾಧನೆಗೆ ತಕ್ಕ ಗೌರವ ಸಿಕ್ಕಿಲ್ಲವೆಂದ ಆಫ್ರಿಕಾ ಮಾಜಿ ವೇಗಿ..!

ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಭಾರತ ಪರ 229  ಏಕದಿನ ಪಂದ್ಯಗಳನ್ನಾಡಿ 315 ವಿಕೆಟ್ ಕಬಳಿಸಿದ್ದಾರೆ. ಇದರ ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ ಮುನ್ನೂರಕ್ಕೂ ಅಧಿಕ ವಿಕೆಟ್‌ ಕಬಳಿಸಿದ ಭಾರತದ ಏಕೈಕ ಬೌಲರ್ ಎನ್ನುವ ಹೆಗ್ಗಳಿಗೆ ಇಂದಿಗೂ ಶ್ರೀನಾಥ್ ಹೆಸರಿನಲ್ಲಿದೆ. ಇನ್ನು 67 ಟೆಸ್ಟ್ ಪಂದ್ಯವನ್ನಾಡಿ 236 ವಿಕೆಟ್ ಕಬಳಿಸಿದ್ದರು. ಇದು ಅಂಕಿ ಸಂಖ್ಯೆಗಳಾದರೆ ಕೆಲವೊಮ್ಮೆ ಭಾರತದ ಸ್ಮರಣೀಯ ಗೆಲುವಿಗೂ ಶ್ರೀನಾಥ್ ಸಾಕ್ಷಿಯಾಗಿದ್ದಾರೆ.