ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ದಿಟ್ಟ ಪ್ರದರ್ಶನಮೊದಲೆರಡು ಪಂದ್ಯ ಗೆದ್ದು ಬೀಗಿರುವ ರೋಹಿತ್ ಶರ್ಮಾ ಪಡೆಆಸ್ಟ್ರೇಲಿಯಾ ಎದುರು ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸೌರವ್ ಗಂಗೂಲಿ

ನವದೆಹಲಿ(ಫೆ.26): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್‌ ಪಂದ್ಯವು ಮಾರ್ಚ್ 01ರಿಂದ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ಆರಂಭವಾಗಲಿದೆ.

ಮೂರನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದೆ. ಈಗಾಗಲೇ ಮೊದಲೆರಡು ಪಂದ್ಯ ಸೋತು ಸುಣ್ಣವಾಗಿರುವ ಆಸ್ಟ್ರೇಲಿಯಾ ತಂಡವು, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕಾಯಂ ನಾಯಕ ಪ್ಯಾಟ್ ಕಮಿನ್ಸ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಇನ್ನು ಸ್ಪೋಟಕ ಬ್ಯಾಟರ್ ಡೇವಿಡ್‌ ವಾರ್ನರ್‌ ಕೂಡಾ ತವರಿಗೆ ವಾಪಸ್ಸಾಗಿದ್ದು, ಜೋಶ್ ಹೇಜಲ್‌ವುಡ್‌ ಕೂಡಾ ಉಳಿದೆರಡು ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಎರಡು ಟೆಸ್ಟ್‌ ಪಂದ್ಯಗಳ ಫಲಿತಾಂಶದ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.

" ನಾನು ಈ ಸರಣಿಯನ್ನು 4-0 ಅಂತರದಲ್ಲಿ ಜಯಿಸುವುದನ್ನು ಎದುರು ನೋಡುತ್ತಿದ್ದೇನೆ. ಯಾಕೆಂದರೆ ಭಾರತವನ್ನು ಸೋಲಿಸುವುದು ಆಸ್ಟ್ರೇಲಿಯಾ ಪಾಲಿಗೆ ಸುಲಭದ ಮಾತಲ್ಲ. ಈ ರೀತಿಯ ವಾತಾವರಣದಲ್ಲಿ ನಾವು ಸಾಕಷ್ಟು ಬಲಾಢ್ಯ ತಂಡವಾಗಿದ್ದೇವೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Border Gavaskar Trophy ವಿಶ್ರಾಂತಿ ಬಳಿಕ ತಂಡ ಸೇರಿದ ಭಾರ​ತೀ​ಯ​ರು..!

ಪ್ಯಾಟ್‌ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಸರಣಿ ಗೆಲ್ಲುವ ಅವಕಾಶವನ್ನು ಈಗಾಗಲೇ ಕೈ ಚೆಲ್ಲಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಹಾಗೂ ಡೆಲ್ಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವು ಕೇವಲ ಮೂರು ದಿನಗಳೊಳಗಾಗಿ ಮುಕ್ತಾಯವಾಗಿವೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳ ಬಗ್ಗೆ ಹೇಳುವುದಾದರೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲೆರಡು ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 2-0 ಮುನ್ನಡೆ ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್‌ ಹಾಗೂ 132 ರನ್‌ಗಳ ಗೆಲುವು ಸಾಧಿಸಿತ್ತು. ಇನ್ನು ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲೆರಡು ಟೆಸ್ಟ್‌ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ಆಸ್ಟ್ರೇಲಿಯಾ ಅಕ್ಷರಶಃ ತತ್ತರಿಸಿ ಹೋಗಿದೆ.