* ಧೋನಿ ಫಾರ್ಮ್‌ ಹೌಸ್‌ಗೆ 2000 ಕಡಕ್‌ನಾಥ್ ಕೋಳಿಗಳು ಸೇರ್ಪಡೆ* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯದ ಬಳಿಕ ಕೃಷಿ-ಪಶುಸಂಗೋಪನೆಯತ್ತ ಧೋನಿ ಗಮನ* ಸದ್ಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಧೋನಿ

ರಾಂಚಿ(ಏ.25): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕೃಷಿ, ಕೋಳಿ ಸಾಕಾಣಿಕೆಯತ್ತ ಗಮನ ಹರಿಸಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ (MS Dhoni), ಇತ್ತೀಚೆಗೆ ಕಡಕ್‌ನಾಥ್‌ ತಳಿಯ ಸುಮಾರು 2000 ಕೋಳಿಗಳನ್ನು ಖರೀದಿಸಿದ್ದಾರೆ. ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಸಹಕಾರಿ ಸಂಸ್ಥೆಯಿಂದ ಧೋನಿ ಈ ಕೋಳಿಗಳನ್ನು ತಮ್ಮ ಫಾರ್ಮ್‌ಹೌಸ್‌ಗೆ ತರಿಸಿದ್ದಾರೆ. ಈ ಕೋಳಿಯ ಮೊಟ್ಟೆಹಾಗೂ ಮಾಂಸ ಇತರೆ ತಳಿಗಳಿಗಿಂತ ದುಬಾರಿ.

ಮಹೇಂದ್ರ ಸಿಂಗ್ ಧೋನಿ ಫಾರ್ಮ್‌ ಹೌಸ್‌ನಲ್ಲಿ ಕಡಕ್‌ನಾಥ್‌ ತಳಿಯ ಕೋಳಿ (Kadaknath chicks) ಸಾಕಾಣಿಕೆಗೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹಿಂದೆಯೇ ಧೋನಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಕಡಕ್‌ನಾಥ್‌ ತಳಿಯ ಕೋಳಿ ಸಾಕಾಣಿಕೆ ಮಾಡಲು ಒಲವು ತೋರಿದ್ದರು. ಆದರೆ ಹಕ್ಕಿಜ್ವರದ ಭೀತಿಯಿಂದಾಗಿ ಈ ಯೋಜನೆಯನ್ನು ಅನಿವಾರ್ಯವಾಗಿ ಮುಂದೂಡಿದ್ದರು. 

ಮಹೇಂದ್ರ ಸಿಂಗ್ ಧೋನಿ ಸದ್ಯ 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಧೋನಿ, ಮುಂಬೈ ಇಂಡಿಯನ್ಸ್ ಎದುರು ಭರ್ಜರಿಯಾಗಿ ಮ್ಯಾಚ್ ಫಿನಿಶ್‌ ಮಾಡಿ ಮಿಂಚಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. 

ಪಂತ್‌ ಹೇಳಿದ್ದಕ್ಕೆ ಮೈದಾನ ಪ್ರವೇಶಿಸಿದ್ದ ಕೋಚ್‌ ಆಮ್ರೆ

ಮುಂಬೈ: ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಉಂಟಾಗಿದ್ದ ನೋಬಾಲ್‌ ವಿವಾದದ ವೇಳೆ ಸಹಾಯಕ ಕೋಚ್‌ ಪ್ರವೀಣ್‌ ಆಮ್ರೆ (Pravin Amre) ಅವರನ್ನು ಮೈದಾನಕ್ಕೆ ಹೋಗಲು ಹೇಳಿದ್ದು ನಾಯಕ ರಿಷಭ್‌ ಪಂತ್‌ (Rishabh Pant) ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ. 

No-Ball controversy: ರಿಷಭ್‌ ಪಂತ್‌ಗೆ 1.15 ಕೋಟಿ ರೂ ದಂಡ, ಕೋಚ್ ಆಮ್ರೆಗೂ ಭಾರೀ ಶಿಕ್ಷೆ..!

ಪಂದ್ಯದ ಕೊನೆ ಓವರಲ್ಲಿ ನೋಬಾಲ್‌ಗಾಗಿ ಮನವಿ ಮಾಡುವ ವೇಳೆ ಮೈದಾನದ ಹೊರಗಿದ್ದ ಪಂತ್‌ ಸಿಟ್ಟಿನಿಂದ ವರ್ತಿಸಿ, ಬ್ಯಾಟರ್‌ಗಳನ್ನು ಹಿಂದಕ್ಕೆ ಕರೆದಿದ್ದರು. ಈ ನಡುವೆ ಆಮ್ರೆ ಮೈದಾನಕ್ಕೆ ಪ್ರವೇಶಿಸಿದ್ದರು. ‘ಪಂತ್‌ ಅವರು ಆಮ್ರೆಗೆ ಮೈದಾನಕ್ಕೆ ಹೋಗಲು ಸೂಚಿಸಿದರು. ಇಲ್ಲದಿದ್ದರೆ ತಾವೇ ಹೋಗುವುದಾಗಿ ಹೇಳಿದ್ದರು. ಆದರೆ ನಾಯಕ ಹೋಗುವುದು ಸರಿಯಲ್ಲ ಎಂದುಕೊಂಡು ಆಮ್ರೆ ಅವರೇ ಮೈದಾನ ಪ್ರವೇಶಿಸಿದರು’ ಎಂದು ಡೆಲ್ಲಿ ತಂಡದವರೇ ಹೇಳಿದ್ದಾಗಿ ವರದಿಯಾಗಿದೆ.

ಸಾಹಗೆ ಬೆದರಿಕೆ: ಪತ್ರಕರ್ತ ಮಜುಂದಾರ್‌ಗೆ ನಿಷೇಧ?

ಮುಂಬೈ: ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ ಅವರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಪತ್ರಕರ್ತ ಬೋರಿಯಾ ಮಜುಂದಾರ್‌ ಅವರಿಗೆ ಬಿಸಿಸಿಐ 2 ವರ್ಷಗಳ ನಿಷೇಧ ಹೇರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. 'ಮಜುಂದಾರ್‌ರನ್ನು ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿಸದಂತೆ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸೂಚಿಸಿದ್ದೇವೆ. ಬಿಸಿಸಿಐ ಕೂಡಾ ಅವರಿಗೆ ಯಾವುದೇ ಅನುಮತಿ ನೀಡುವುದಿಲ್ಲ. ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಐಸಿಸಿಗೂ ಮನವಿ ಮಾಡುತ್ತೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಸಂದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿದ್ದಾಗಿ ಸಾಹ ಆರೋಪಿಸಿದ್ದರು. ಬಳಿಕ ಈ ಬಗ್ಗೆ ತನಿಖೆಗೆ ಬಿಸಿಸಿಐ ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಮಜುಂದಾರ್‌ ತಪ್ಪಿತಸ್ಥ ಎಂದು ವರದಿ ನೀಡಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಟಿ20: ರಾಜ್ಯ ತಂಡಕ್ಕೆ 4ನೇ ಸೋಲು

ರಾಜ್‌ಕೋಟ್‌: ರಾಷ್ಟ್ರೀಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಎಲೈಟ್‌ ‘ಸಿ’ ಗುಂಪಿನಲ್ಲಿರುವ ರಾಜ್ಯ ತಂಡ ಭಾನುವಾರ ಡೆಲ್ಲಿ ವಿರುದ್ಧ 6 ವಿಕೆಟ್‌ ಸೋಲನುಭವಿಸಿತು. ಇದು ತಂಡಕ್ಕೆ 5 ಪಂದ್ಯಗಳಲ್ಲಿ 4ನೇ ಸೋಲು. ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡ 17.4 ಓವರ್‌ಗಳಲ್ಲಿ ಕೇವಲ 54 ರನ್‌ಗೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದ ಡೆಲ್ಲಿ 15.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.