ಮೆಲ್ಬರ್ನ್(ಮೇ.25)‌: 2010ರ ಐಪಿಎಲ್‌ ಹರಾಜಿನಲ್ಲಿ ಸುಮಾರು 3.2 ಕೋಟಿ ರು.ಗೆ (4.25 ಲಕ್ಷ ಡಾಲರ್‌) ಕೊಚ್ಚಿ ಟಸ್ಕ​ರ್ಸ್ ತಂಡದ ಪಾಲಾಗಿದ್ದ ಆಸ್ಪ್ರೇಲಿಯಾದ ಕ್ರಿಕೆಟಿಗ ಬ್ರಾಡ್‌ ಹಾಜ್‌ ತಮಗೆ ಬಾಕಿ ಹಣ ಬರುತ್ತಾ ಎಂದು ಬಿಸಿಸಿಐ ಅನ್ನು ಪ್ರಶ್ನಿಸಿದ್ದಾರೆ. 

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ, ಆಟಗಾರರಿಗೆ ತಂಡವೊಂದು ಒಂದು ದಶಕ ಕಳೆದರೂ ಸರಿಯಾಗಿ ಹಣ ಪಾವತಿ ಮಾಡಿಲ್ಲ ಎನ್ನುವ ವಿಚಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬ್ರಾಡ್ ಹಾಜ್ 2008ರಿಂದ 2014ರ ಅವಧಿಯಲ್ಲಿ ವಿವಿಧ ಫ್ರಾಂಚೈಸಿ ಪರ ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ.

ಇನ್ನು 2011ರಲ್ಲಿ ಕೊಚ್ಚಿ ಟಸ್ಕರ್ಸ್‌ ಪರ 14 ಪಂದ್ಯ ಆಡಿ 285 ರನ್‌ ಗಳಿಸಿದ್ದ ಅವರು, ಆಟಗಾರರಿಗೆ ಶೇ.35 ಹಣ ಬರಬೇಕಿದೆ. ಅದು ಸಿಗುವ ಸಾಧ್ಯತೆ ಇದೆಯಾ ಎಂದು ಟ್ವೀಟ್‌ ಮಾಡಿದ್ದಾರೆ. ಕೊಚ್ಚಿ ತಂಡವನ್ನು ಹಣ ಬಾಕಿ ಉಳಿಸಿಕೊಂಡ ಕಾರಣಕ್ಕೆ ಒಂದೇ ಋುತುವಿನ ಬಳಿಕ ರದ್ದು ಮಾಡಲಾಗಿತ್ತು.

ಕೋವಿಡ್‌ ವಿರುದ್ದದ ಸಮರಕ್ಕೆ 2000 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಒದಗಿಸಿದ ಬಿಸಿಸಿಐ

ಕೇವಲ ಒಂದು ಐಪಿಎಲ್ ಆವೃತ್ತಿಯಲ್ಲಿ ಮಾತ್ರ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕ​ರ್ಸ್ ತಂಡ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿತ್ತು. 10 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಕೊಚ್ಚಿ ಟಸ್ಕ​ರ್ಸ್ ತಂಡವು 14 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 8 ಸೋಲುಗಳನ್ನು ಕಾಣುವ ಮೂಲಕ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕೊಚ್ಚಿ ಟಸ್ಕ​ರ್ಸ್ ತಂಡದಲ್ಲಿ ಹಾಜ್ ಮಾತ್ರವಲ್ಲದೇ ಮಹೇಲಾ ಜಯವರ್ಧನೆ, ಬ್ರೆಂಡನ್ ಮೆಕ್ಕಲಂ, ರವೀಂದ್ರ ಜಡೇಜಾ ಅವರಂತಹ ಆಟಗಾರರು ಕಾಣಿಸಿಕೊಂಡಿದ್ದರು.

ಆಸೀಸ್‌ ಮಾಜಿ ಕ್ರಿಕೆಟಿಗ ಬ್ರಾಡ್ ಹಾಜ್‌, ರಾಜಸ್ಥಾನ ರಾಯಲ್ಸ್‌, ಕೋಲ್ಕತ ನೈಟ್‌ ರೈಡರ್ಸ್‌ ಹಾಗೂ ಕೊಚ್ಚಿ ಟಸ್ಕ​ರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಒಟ್ಟಾರೆ 66 ಪಂದ್ಯಗಳನ್ನಾಡಿದ್ದ ಹಾಜ್‌ 33.33ರ ಬ್ಯಾಟಿಂಗ್‌ ಸರಾಸರಿಯಲ್ಲಿ 6 ಅರ್ಧಶತಕ ಸಹಿತ 1,400 ರನ್‌ ಬಾರಿಸಿದ್ದರು.