ಸೌಥಾಂಪ್ಟನ್(ಜು.04): ಕೊರೋನಾ, ಲಾಕ್‌ಡೌನ್ ಬಳಿಕ ಆರಂಭವಾಗುತ್ತಿರುವ ಮೊದಲ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡ ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಇದೇ ಜುಲೈ 08ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಟಾರ್ ಆಟಗಾರರಾದ ಜಾನಿ ಬೇರ್‌ಸ್ಟೋ ಹಾಗೂ ಮೊಯಿನ್ ಅಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಮೂರು ಪಂದ್ಯಗಳ ಸರಣಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಹಾಲಿ ನಾಯಕ ಜೋ ರೂಟ್ ಅನುಪಸ್ಥಿತಿಯಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂದು(ಜು.04) ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 22 ಸದಸ್ಯರನ್ನೊಳಗೊಂಡ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಈ ಪೈಕಿ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ್ದ 22 ವರ್ಷದ ಡೋಮಿನಿಕ್ ಬೆಸ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಉಪನಾಯಕ ಜೋಸ್ ಬಟ್ಲರ್ ವಿಕೆಟ್ ಕೀಪರ್ ಮೊದಲ ಆಯ್ಕೆಯಾಗಿದ್ದು, ಎರಡನೇ ಆಯ್ಕೆ ರೂಪದಲ್ಲಿ ಬೆನ್ ಫೋಕ್ಸ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

ಈ 22 ಆಟಗಾರರನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಆಯ್ಕೆಯಲ್ಲಿ 13 ಆಟಗಾರರು ಸ್ಥಾನ ಪಡೆದಿದ್ದರೆ, ಉಳಿದವರು ಕಾಯ್ದಿರಿಸಿದ್ದ ಆಟಗಾರರೆನಿಸಿದ್ದಾರೆ. ಸುಮಾರು ಮೂರುವರೆ ತಿಂಗಳುಗಳ ಬಳಿಕ ಕ್ರಿಕೆಟ್ ಚಟುವಟಿಕೆ ಗರಿಗೆದ್ದರಿದ್ದು, ಎಂಜಲು ಬಳಕೆ ನಿಷೇಧ ಸೇರಿದಂತೆ ಕೊರೋನಾ ಕುರಿತಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೂರಾರು ದಿನಗಳ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿ ಕ್ರಿಕೆಟ್ ಸರಣಿ ಇದಾಗಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಸರಣಿಯು ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ನಡೆಯುತ್ತಿದೆ. 

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್(ನಾಯಕ), ಜೇಮ್ಸ್ ಆಂಡರ್‌ಸನ್, ಜೋಫ್ರಾ ಆರ್ಚರ್, ಡೋಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಜಾಕ್ ಕ್ರ್ಯಾವ್ಲಿ, ಜೋ ಡೆನ್ಲಿ, ಓಲಿ ಪೋಪ್, ಡಾಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್

ಮೀಸಲು ಆಟಗಾರರು:
ಜೇಮ್ಸ್ ಬ್ರಾಸಿ, ಸ್ಯಾಮ್ ಕರ್ರನ್, ಬೆನ್ ಫೋಕ್ಸ್, ಡ್ಯಾನ್ ಲಾವರೆನ್ಸ್, ಜಾಕ್ ಲೀಚ್, ಸಕೀಬ್ ಮೊಹಮ್ಮದ್, ಕ್ರೇಗ್ ಒವರ್‌ಟನ್, ಒಲಿ ರಾಬಿನ್ಸನ್, ಒಲಿ ಸ್ಟೋನ್

ವೆಸ್ಟ್ ಇಂಡೀಸ್-ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ:

ಜುಲೈ 08-12: ಮೊದಲ ಟೆಸ್ಟ್ - ಸೌಂಥಾಪ್ಟನ್ 

ಜುಲೈ 16-20: ಎರಡನೇ ಟೆಸ್ಟ್ - ಮ್ಯಾಂಚೆಸ್ಟರ್

ಜುಲೈ 24-28: ಮೂರನೇ ಟೆಸ್ಟ್ - ಮ್ಯಾಂಚೆಸ್ಟರ್