ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಪಾಕಿಸ್ತಾನ ತಂಡ ಹರಿಣಗಳಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕರಾಚಿ(ಜ.28): ಫವಾದ್ ಅಲಂ ಬಾರಿಸಿದ ಆಕರ್ಷಕ ಶತಕ(109)ದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ದಶಕಗಳ ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಆಲಂ, ಕಮ್‌ಬ್ಯಾಕ್ ಮಾಡಿ ಕೆಲವೇ ದಿನಗಳಲ್ಲಿ ಎರಡು ಶತಕ ಬಾರಿಸುವ ಮೂಲಕ ಬ್ಯಾಟ್ ನಿಂದಲೇ ಉತ್ತರ ನೀಡಿದ್ದಾರೆ. 2ನೇ ದಿನದ ಅಂತ್ಯಕ್ಕೆ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದ್ದು, 88 ರನ್ ಮುನ್ನಡೆ ಪಡೆದಿದೆ.
ಮೊದಲ ದಿನದಾಟದಂತ್ಯಕ್ಕೆ 33 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್ ಫವಾದ್ ಆಲಂ ಹಾಗೂ ಅಜರ್ ಅಲಿ ಆಸರೆಯಾದರು. 220 ಎಸೆತಗಳನ್ನು ಎದುರಿಸಿ ಸಿಕ್ಸರ್‌ನೊಂದಿಗೆ ಆಲಂ ತಮ್ಮ ವೃತ್ತಿಜೀವನದ ಮೂರನೇ ಶತಕ ಪೂರೈಸಿ ಸಂಭ್ರಮಿಸಿದರು.
ಫವಾದ್ ಆಲಂ ಒಟ್ಟು 245 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಅಜರ್ ಅಲಿ(51) ಹಾಗೂ ಫಾಹಿಮ್ ಅಶ್ರಫ್(64) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು.
ಟೆಸ್ಟ್: ಮೊದಲ ದಿನವೇ ಪಾಕ್ ವಿರುದ್ಧ ಹರಿಣಗಳ ಮೇಲುಗೈ
ಸದ್ಯ ಪಾಕಿಸ್ತಾನ ಪರ ಹಸನ್ ಅಲಿ(11) ಹಾಗೂ ನೂಮನ್ ಅಲಿ(6) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ, ಆನ್ರಿಚ್ ನೋಕಿಯೇ, ಲುಂಗಿ ಎಂಗಿಡಿ, ಕೇಶವ್ ಮಹರಾಜ್ ತಲಾ 2 ವಿಕೆಟ್ ಪಡೆದಿದ್ದಾರೆ.
ಸ್ಕೋರ್: ದ.ಆಫ್ರಿಕಾ 220
ಪಾಕಿಸ್ತಾನ 308/8
(*ಎರಡನೇ ದಿನದಾಟ ಮುಕ್ತಾಯದ ವೇಳೆಗೆ)
