ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ; ಹೂ ಮಳೆ ಸುರಿಸಿ ಸ್ವಾಗತಿಸಿದ ಫ್ಯಾನ್ಸ್..! ವಿಡಿಯೋ ವೈರಲ್
LGM ಟ್ರೈಲರ್ ಲಾಂಚ್‌ಗೆ ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ
ಎಂ ಎಸ್ ಧೋನಿಯನ್ನು ಏರ್ಪೋರ್ಟ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಫ್ಯಾನ್ಸ್
ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಧೋನಿ
ಚೆನ್ನೈ(ಜು.10): ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಹಾಗೂ ಚೆನ್ನೈಗೂ ಒಂದು ರೀತಿ ಅವಿನಾಭಾವ ಸಂಬಂಧವಿದೆ. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಾ ಬಂದಿದ್ದಾರೆ. ಅಭಿಮಾನಿಗಳು ಧೋನಿಯನ್ನು ದೇವ ಮಾನವ ಎಂಬಂತೆ ಆರಾಧಿಸುತ್ತಾ ಬಂದಿದ್ದಾರೆ. ಧೋನಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ತಾಲಾ' ಎಂದು ಸಂಬೋಧಿಸುತ್ತಾ ಬಂದಿದ್ದಾರೆ. ತಮಿಳಿನಲ್ಲಿ 'ತಾಲಾ' ಎಂದರೆ ಬಾಸ್ ಎಂದರ್ಥ. ಇನ್ನು ಸ್ವತಃ ಮಹೇಂದ್ರ ಸಿಂಗ್ ಧೋನಿ ಕೂಡಾ ಚೆನ್ನೈ ಅನ್ನು ತಮ್ಮ ಎರಡನೇ ತವರು ಎಂದು ಕರೆದಿದ್ದಾರೆ. ರಾಂಚಿ ಮೂಲದ ಧೋನಿ, ಚೆನ್ನೈನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದೀಗ ಸಿನಿಮಾ ಪ್ರೊಡಕ್ಷನ್‌ಗೂ ಕೈ ಹಾಕಿರುವ ಧೋನಿ, LGM ಎನ್ನುವ ತಮಿಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಧೋನಿ ಎಂಟರ್‌ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ LGM ಸಿನಿಮಾ ನಿರ್ಮಾಣವಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಟ್ರೈಲರ್ ಲಾಂಚ್ ಮಾಡಲು ಚೆನ್ನೈನ ಏರ್ಪೋರ್ಟ್‌ನಲ್ಲಿ ಬಂದಿಳಿದರು. ಧೋನಿ, ಚೆನ್ನೈನ ಏರ್ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ಧೋನಿ ಏರ್‌ಪೋರ್ಟ್‌ನಿಂದ ಹೊರಬರುವ ಗೇಟ್ ಬಳಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸಾಗಾರೋಪಾದಿಯಲ್ಲಿ ನೆರೆದಿದ್ದರು. ಈ ಮೂಲಕ ತಮ್ಮ ನೆಚ್ಚಿನ ಹೀರೋ ಧೋನಿಗೆ ಹೂ ಮಳೆ ಸುರಿಸಿ, ಜಯಕಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಧೋನಿ ಹಾಗೂ ಪತ್ನಿ ಸಾಕ್ಷಿ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಅಭಿಮಾನಿಗಳು ಧೋನಿ.. ಧೋನಿ ಎಂದು ಘೋಷಣೆ ಕೂಗಿದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೋಚ್ ರಾಹುಲ್ ದ್ರಾವಿಡ್ ಜತೆ ವಿರಾಟ್ ಕೊಹ್ಲಿ ವಿಶೇಷ ಪೋಸ್ಟ್..! ಆ ದಿನಗಳನ್ನು ನೆನಪಿಸಿಕೊಂಡ ವಿರಾಟ್..!
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇತ್ತೀಚೆಗಷ್ಟೇ ಮುಕ್ತಾಯವಾದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ಜತೆಗೆ ಅತಿಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. 2022ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಆದರೆ ಮರು ವರ್ಷ ಫಿನಿಕ್ಸ್‌ನಂತೆ ಎದ್ದು ಬಂದು 5ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಧೋನಿ ಪಡೆ ಯಶಸ್ವಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆಯೇ 42 ವರ್ಷದ ಎಂ ಎಸ್ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಲಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಎಂ ಎಸ್ ಧೋನಿ, ಇನ್ನೂ ಒಂದು ಸೀಸನ್ ಐಪಿಎಲ್ ಆಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಧೋನಿ ಮುಂದಿನ ವರ್ಷಕ್ಕೂ ಫಿಟ್ ಇರ್ತಾರಾ?: ಕುತೂಹಲ!
ಪ್ರಶಸ್ತಿ ಸಮಾರಂಭದ ವೇಳೆ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ‘ಭವಿಷ್ಯದ’ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ‘ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಆದರೆ ಎಲ್ಲೆಡೆ ಅಭಿಮಾನಿಗಳಿಂದ ಬಹಳ ಪ್ರೀತಿ ಸಿಗುತ್ತಿದೆ. ಇನ್ನೊಂದು ಆವೃತ್ತಿಯಲ್ಲಿ ಆಡಿದರೆ ಅಭಿಮಾನಿಗಳಿಗೆ ಉಡುಗೊರೆ ನೀಡಿದಂತಾಗುತ್ತದೆ. ಆದರೆ ಮುಂದಿನ ಐಪಿಎಲ್‌ನಲ್ಲಿ ಆಡಲು 9 ತಿಂಗಳು ಪರಿಶ್ರಮ ವಹಿಸಬೇಕಿದೆ’ ಎಂದಿದ್ದರು.