ಜೋಹಾನ್ಸ್‌ಬರ್ಗ್(ಏ.05): ಫಖರ್ ಜಮಾನ್ ಹೋರಾಟದ ಶತಕ (193)ದ ಹೊರತಾಗಿಯೂ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 17 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಮೂರನೇ ಹಾಗೂ ನಿರ್ಣಾಯಕ ಪಂದ್ಯ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.

ದಕ್ಷಿಣ ಆಫ್ರಿಕಾ ನೀಡಿದ್ದ 342 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಒಂದು ಹಂತದಲ್ಲಿ 205 ರನ್‌ಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ಫಖರ್, ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರು. 155 ಎಸೆತಗಳಲ್ಲಿ 18 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 193 ರನ್‌ಗಳಿಸಿ ಕೊನೆ ಓವರಲ್ಲಿ ರನೌಟಾದರು. ಫಖರ್ ಹೊರತುಪಡಿಸಿದರೆ 2ನೇ ಗರಿಷ್ಠ ಮೊತ್ತ ದಾಖಲಿಸಿದ್ದು ನಾಯಕ ಬಾಬರ್ ಆಜಂ(31). ದಕ್ಷಿಣ ಆಫ್ರಿಕಾ ಪರ ಆನ್ರಿಚ್‌ ನೋಕಿಯ 3, ಫೆಲುಕ್ವಾಯೋ 2 ವಿಕೆಟ್ ಕಬಳಿಸುವ ಮೂಲಕ ಪಾಕ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

ವಿರಾಟ್‌, ಹಾಶೀಂ ಆಮ್ಲಾ ದಾಖಲೆ ಅಳಿಸಿ ಹಾಕಿದ ಬಾಬರ್ ಅಜಂ..!

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಾಯಕ ತೆಂಬ ಬವುಮಾ(92), ಕ್ವಿಂಟನ್ ಡಿ ಕಾಕ್(80), ವ್ಯಾನ್ ಡರ್ ಡುಸ್ಸೆನ್(60) ಹಾಗೂ ಡೇವಿಡ್‌ ಮಿಲ್ಲರ್ (50) ಬಾರಿಸಿದ ಅರ್ಧಶತಕಗಳ ನೆರವಿನಿಂದ 50 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತು.

ಇದೀಗ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಏಪ್ರಿಲ್‌ 07ರಂದು ಸೆಂಚುರಿಯನ್‌ನ ಸೆಡನ್‌ಪಾರ್ಕ್‌ ಮೈದಾನದಲ್ಲಿ ನಡೆಯಲಿದೆ.  

ಸ್ಕೋರ್: 

ದಕ್ಷಿಣ ಆಫ್ರಿಕಾ 341/6
ಪಾಕಿಸ್ತಾನ 324