ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ, ಕಿವೀಸ್ ಸಿದ್ದತೆ ಹೇಗಿದೆ?
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಇನ್ನೊಂದೇ ದಿನ ಬಾಕಿ
* ಚೊಚ್ಚಲ ಟೆಸ್ಟ್ ವಿಶ್ವಕಪ್ ಗೆಲ್ಲಲು ಭಾರತ-ನ್ಯೂಜಿಲೆಂಡ್ ನಡುವೆ ಫೈಟ್
* ಎರಡು ತಂಡಗಳಿಂದ ಗೆಲುವಿಗಾಗಿ ಜಿದ್ದಾಜಿದ್ದಿನ ಫೈಟ್
ಸೌಥಾಂಪ್ಟನ್(ಜೂ.17): ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾತರಿಸುತ್ತಿದ್ದು, ಈ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿವೆ.
ಐಪಿಎಲ್ 14ನೇ ಆವೃತ್ತಿ ಕೋವಿಡ್‌ನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡ ಬಳಿಕ, ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬಹುತೇಕ ಆಟಗಾರರು ಭಾರತದಿಂದ ನೇರವಾಗಿ ಇಂಗ್ಲೆಂಡ್ ತೆರಳಿದ್ದರು. ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ ಕಿವೀಸ್ ಪಡೆ, 1-0 ಅಂತರದಲ್ಲಿ ಸರಣಿ ಗೆದ್ದು ಮಹತ್ವದ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದಷ್ಟೇ ಅಲ್ಲ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ, ನಂ.1 ಸ್ಥಾನಕ್ಕೇರಿದೆ.
ಇನ್ನು ಭಾರತೀಯ ಆಟಗಾರರು, ಐಪಿಎಲ್‌ನಿಂದ ಮನೆಗಳಿಗೆ ತೆರಳಿದ ಬಳಿಕ ಕ್ವಾರಂಟೈನ್‌ನಲ್ಲೇ ಹೆಚ್ಚು ಸಮಯ ಕಳೆದರೂ, ಕೆಲ ಅಭ್ಯಾಸ ಪಂದ್ಯಗಳನ್ನು ಆಡಿ ಫೈನಲ್‌ಗೆ ಸಜ್ಜಾಗಿದ್ದಾರೆ. ತಂಡ ಕೊನೆ ಬಾರಿಗೆ ಟೆಸ್ಟ್ ಆಡಿದ್ದು ಈ ವರ್ಷ ಜನವರಿಯಲ್ಲಿ, ಆಸ್ಪ್ರೇಲಿಯಾ ವಿರುದ್ಧ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ!
ಮೇಲ್ನೋಟಕ್ಕೆ ನ್ಯೂಜಿಲೆಂಡ್ ತಂಡಕ್ಕೆ ಅಭ್ಯಾಸದ ಆಧಾರದಲ್ಲಿ ಮೇಲುಗೈ ದೊರೆತರೂ, ಟೀಂ ಇಂಡಿಯಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತ ದೊಡ್ಡ ಪಡೆಯೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದರೂ, ಬಹಳ ಅಳೆದು ತೂಗಿ ಅಂತಿಮ 15ರ ಪಟ್ಟಿಯನ್ನು ಪ್ರಕಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಸ್ಪ್ರೇಲಿಯಾದಲ್ಲಿ ಪ್ರಮುಖ ಆಟಗಾರರು ಗಾಯಾಳುಗಳಾಗಿ ಅಲಭ್ಯರಾದಾಗ, ಯುವ ಹಾಗೂ ಅನನುಭವಿಗಳೇ ಭಾರತ ಸರಣಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನ್ಯೂಜಿಲೆಂಡ್‌ಗಿಂತ ಹೆಚ್ಚು ಅನುಭವ ಹಾಗೂ ಚಾಕಚಕ್ಯತೆ ಭಾರತೀಯ ಆಟಗಾರರಲ್ಲಿದ್ದು, ಭಾರತವೇ ಗೆಲ್ಲುವ ಫೇವರಿಟ್ ಎಂದು ಹಲವರು ಅಭಿಪ್ರಾಯಿಸಿದ್ದಾರೆ.
ಭಾರತದ ಸಿದ್ಧತೆ ಹೇಗಿದೆ?
* 3 ದಿನಗಳ ಅಭ್ಯಾಸ ಪಂದ್ಯವನ್ನು ಆಟಗಾರರು ಆಡಿದ್ದಾರೆ.
* ಇಂಗ್ಲೆಂಡ್‌ಗೆ ತೆರಳಿದ ಬಳಿಕ ತಂಡ ಕಠಿಣ ನೆಟ್ಸ್ ಅಭ್ಯಾಸ ನಡೆಸಿದೆ.
* ಐಪಿಎಲ್‌ನಲ್ಲಿ ಬಹುತೇಕ ಆಟಗಾರರು ಉತ್ತಮ ಲಯದಲ್ಲಿದ್ದರು.
ನ್ಯೂಜಿಲೆಂಡ್‌ನ ಸಿದ್ಧತೆ ಹೇಗಿದೆ?
* ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಸರಣಿ ಆಡಿ ಅಭ್ಯಾಸ ನಡೆಸಿದೆ.
* ಸರಣಿ ಮುಕ್ತಾಯದ ಬಳಿಕ ತಂಡಕ್ಕೆ ನೆಟ್ಸ್ ಅಭ್ಯಾಸಕ್ಕೆ ಸಮಯ ಸಿಕ್ಕಿದೆ.
* ಇಂಗ್ಲೆಂಡ್‌ನ ವಾತಾವರಣದ ಬಗ್ಗೆ ಭಾರತೀಯರಿಗಿಂತ ಹೆಚ್ಚು ಮಾಹಿತಿ ಇದೆ.