ಇಎಸ್‌ಪಿಎನ್‌ಕ್ರಿಕ್‌ಇನ್ಫೋ 2025ರ ಸರ್ವಶ್ರೇಷ್ಠ ಟಿ20 ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಇದರಲ್ಲಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಟ್ಟಿಯಿಂದ ಹೊರಗುಳಿದಿರುವುದು ಅಚ್ಚರಿಗೆ ಕಾರಣವಾಗಿದೆ.  

ಬೆಂಗಳೂರು: 2025ಕ್ಕೆ ವಿದಾಯ ಹೇಳಿ 2026 ಸ್ವಾಗತಿಸಲಾಗಿದೆ. 2025ರಲ್ಲಿ ಹಲವಾರು ಅವಿಸ್ಮರಣೀಯ ಟಿ20 ಪಂದ್ಯಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಅದರಲ್ಲೂ ಚುಟುಕು ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವ ಮೂಲಕ ಐಸಿಸಿ ಟಿ20 ಶ್ರೇಯಾಂಕದಲ್ಲೂ ನಂಬರ್ ಒನ್ ಸ್ಥಾನಿಯಾಗಿಯೇ ತನ್ನ ಅಭಿಯಾನವನ್ನು ಮುಗಿಸಿದೆ.

ಇದೀಗ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಸಂಸ್ಥೆಯು 2025ರ ಸರ್ವಶ್ರೇಷ್ಠ ಟಿ20 ಆಡುವ ಹನ್ನೊಂದರ ಬಳಗದ ತಂಡವನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೆಲ್ಲದರ ಹೊರತಾಗಿಯೂ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 2025ರ ಸರ್ವಶ್ರೇಷ್ಠ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನುಳಿದಂತೆ ಇಂಗ್ಲೆಂಡ್‌ನ ಮೂವರು, ವೆಸ್ಟ್‌ ಇಂಡೀಸ್‌ನ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನಿಸ್ತಾನದ ತಲಾ ಒಂದು ಆಟಗಾರರು ಈ ಸರ್ವಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2025ರ ಸರ್ವಶ್ರೇಷ್ಠ ಟಿ20 ತಂಡದಲ್ಲಿ ಭಾರತ-ಇಂಗ್ಲೆಂಡ್‌ನವರದ್ದೇ ಸಿಂಹಪಾಲು!

ಇನ್ನು 2025ರ ಸರ್ವಶ್ರೇಷ್ಠ ಟಿ20 ತಂಡದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡದ ಆಟಗಾರರೇ ಸಿಂಹಪಾಲು ಪಡೆದಿದ್ದಾರೆ. ಆರಂಭಿಕರಾಗಿ ಭಾರತದ ಅಭಿಷೇಕ್ ಶರ್ಮಾ ಹಾಗೂ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ಕಳೆದೊಂದು ವರ್ಷದಲ್ಲಿ ಪವರ್‌ಪ್ಲೇ ಓವರ್‌ನಲ್ಲೇ ಎದುರಾಳಿ ಬೌಲರ್‌ಗಳನ್ನು ಚೆಂಡಾಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಸ್ಥಾನ ಪಡೆದಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್ ಬಿಗ್ ಹಿಟ್ಟರ್ ನಿಕೋಲಸ್ ಪೂರನ್ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಈ ತಂಡದ ನಾಯಕತ್ವ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಬ್ಯಾಟರ್ ಡೆವಾಲ್ಡ್ ಬ್ರೆವೀಸ್ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗ ಮುನ್ನಡೆಸಲಿರುವ ಜಸ್ಪ್ರೀತ್ ಬುಮ್ರಾ!

ಫಿನಿಶರ್ ರೂಪದಲ್ಲಿ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಸ್ಥಾನ ಪಡೆದುಕೊಂಡರೆ, ವೇಗದ ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರ್ರನ್ ಹಾಗೂ ಜೇಸನ್ ಹೋಲ್ಡರ್ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗಬಲ್ಲ ಪ್ರಮುಖ ಆಲ್ರೌಂಡರ್‌ಗಳಾಗಿದ್ದಾರೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಆಫ್ಘಾನಿಸ್ತಾನದ ನೂರ್ ಅಹಮದ್ ಹಾಗೂ ಭಾರತದ ವರುಣ್ ಚಕ್ರವರ್ತಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ವೇಗದ ಬೌಲಿಂಗ್ ದಾಳಿಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಒಟ್ಟಾರೆ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಆಯ್ಕೆ ಮಾಡಿದ 2025ರ ಸರ್ವಶ್ರೇಷ್ಠ ತಂಡವು ಅತ್ಯಂತ ಸಮತೋಲಿತ ಹಾಗೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

Scroll to load tweet…

2025ರ ಸರ್ವಶ್ರೇಷ್ಠ ಟಿ20 ತಂಡ ಹೀಗಿದೆ ನೋಡಿ:

ಅಭಿಷೇಕ್ ಶರ್ಮಾ, ಫಿಲ್ ಸಾಲ್ಟ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ನಿಕೋಲಸ್ ಪೂರನ್(ನಾಯಕ), ಡೆವಾಲ್ಡ್ ಬ್ರೆವೀಸ್, ಟಿಮ್ ಡೇವಿಡ್, ಸ್ಯಾಮ್ ಕರ್ರನ್, ಜೇಸನ್ ಹೋಲ್ಡರ್, ನೂರ್ ಅಹಮದ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.