ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ತಂಡದ ಸ್ಟಾರ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಬೆನ್‌ ಸ್ಟೋಕ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ಲಂಡನ್(ಡಿ.12): ಜನವರಿ 14ರಿಂದ ಆರಂಭವಾಗಲಿರುವ ಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ಸ್ಟಾರ್ ಆಟಗಾರರಾದ ಮಾರಕ ವೇಗಿ ಜೋಫ್ರಾ ಆರ್ಚರ್ ಹಾಗೂ ನಂ.1 ಆಲ್ರೌಂಡರ್ ಬೆನ್ ಸ್ಟೋಕ್ಸ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಭಾರತ ವಿರುದ್ದದ ದೀರ್ಘಕಾಲಿಕ ಸರಣಿಗೂ ಮುನ್ನ ಉಪಖಂಡದಲ್ಲಿ ನಡೆಯುತ್ತಿರುವ ಈ ಸರಣಿ ಇಂಗ್ಲೆಂಡ್ ಪಾಲಿಗೆ ಸಾಕಷ್ಟು ಮಹತ್ವದ್ದಾಗಿದೆ. ಈ ಎರಡು ಟೆಸ್ಟ್‌ ಪಂದ್ಯಕ್ಕೆ ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. 

ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿಯು 16 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ್ದು, ಕಳಫೆ ಫಾರ್ಮ್‌ನಿಂದ ಬಳಲುತ್ತಿರುವ ಜಾನಿ ಬೇರ್‌ಸ್ಟೋವ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 31 ವರ್ಷದ ಜಾನಿ ಬೇರ್‌ಸ್ಟೋವ್ 2019ರಲ್ಲಿ 10 ಟೆಸ್ಟ್‌ ಪಂದ್ಯಗಳನ್ನಾಡಿ ಕೇವಲ 18.55ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಓಲಿ ಪೋಪ್ ಭುಜದ ನೋವಿಗೆ ತುತ್ತಾಗಿದ್ದು, ರೋರಿ ಬರ್ನ್ಸ್‌ ಕೂಡಾ ಪಿತೃತ್ವದ ರಜೆ ಪಡೆದುಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ಪರ 70 ಟೆಸ್ಟ್‌ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರ ಬೇರ್‌ಸ್ಟೋವ್‌ಗೆ ಅವಕಾಶ ಕಲ್ಪಿಸಲಾಗಿದೆ.

ಇಂಗ್ಲೆಂಡ್ ತಂಡದ ಭಾರತ ಪ್ರವಾಸ; ಟೆಸ್ಟ್, ಏಕದಿನ,ಟಿ20 ವೇಳಾಪಟ್ಟಿ ಪ್ರಕಟ!

ಖಾಲಿ ಮೈದಾನದಲ್ಲಿ ಈ ಎರಡು ಟೆಸ್ಟ್‌ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಜನವರಿ 14ರಿಂದ ಆರಂಭವಾದರೆ, ಎರಡನೇ ಟೆಸ್ಟ್ ಪಂದ್ಯ 22ರಿಂದ ಶುರುವಾಗಲಿದೆ. 

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಜೋ ರೋಟ್(ನಾಯಕ), ಮೊಯಿನ್ ಅಲಿ, ಜೇಮ್ಸ್‌ ಆಂಡರ್‌ಸನ್, ಜಾನಿ ಬೇರ್‌ಸ್ಟೋವ್, ಡಾಮ್‌ ಬಿಸ್‌, ಸ್ಟುವರ್ಟ್‌ ಬ್ರಾಡ್‌, ಜೋಸ್ ಬಟ್ಲರ್, ಜಾಕ್ ಕ್ರಾವ್ಲಿ, ಸ್ಯಾಮ್ ಕರ್ರನ್, ಬೆನ್ ಫೋಕ್ಸ್, ಡಾನ್ ಲಾರೆನ್ಸ್‌, ಜ್ಯಾಕ್ ಲೀಚ್, ಡಾಮ್ ಸಿಬ್ಲಿ, ಓಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಕಾಯ್ದಿರಿಸಿದ ಆಟಗಾರರು: ಜೇಮ್ಸ್‌ ಬ್ರಾಸಿ, ಮಾಸೋನ್ ಕ್ರಾನಿ, ಸಕೀಬ್ ಮೊಹಮ್ಮದ್, ಕ್ರೇಗ್‌ ಒವರ್‌ಟನ್, ಮ್ಯಾಥ್ಯೂ ಪಾರ್ಕಿನ್‌ಸನ್, ಒಲಿ ರಾಬಿನ್‌ಸನ್, ಅಮರ್‌ ವ್ರಿದ್ದಿ.