ಇಂಗ್ಲೆಂಡ್ ವಿರುದ್ದ ಟಿ20 ಸರಣಿಯನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ, ಇದು ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ರಿಹರ್ಸಲ್ ಕೂಡಾ ಅಲ್ಲ ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಮಾ.11): ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ, ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ರಿಹರ್ಸಲ್ ಅಲ್ಲ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಬುಧವಾರ ಹೇಳಿದ್ದಾರೆ.
‘ನಾವು ಹೆಚ್ಚಿಗೆ ಮುಂದಾಲೋಚನೆ ಮಾಡುತ್ತಿಲ್ಲ. ಸದ್ಯಕ್ಕೆ ಸರಣಿ ಗೆಲ್ಲುವುದೊಂದೇ ನಮ್ಮ ಗುರಿ. ಈ ಸರಣಿ ವಿಶ್ವಕಪ್‌ನ ರಿಹರ್ಸಲ್ ಅಲ್ಲ’ ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈಗಿನ ಸರಣಿಯಲ್ಲಿ ಹೆಚ್ಚಿನ ಗಮನ ಹರಿಸಿ ಉತ್ತಮ ಪ್ರದರ್ಶನ ತೋರಿದರೆ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ ಎಂದು ಹಿಟ್‌ಮ್ಯಾನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ಫೆಬ್ರವರಿ 12ರಿಂದ ಆರಂಭವಾಗಲಿದ್ದು, ಈ ಸರಣಿಯ ಐದು ಪಂದ್ಯಗಳಿಗೂ ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ರೋಹಿತ್ ಜತೆಗೆ ಇನಿಂಗ್ಸ್ ಆರಂಭಿಸುವವರು ಯಾರು?, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಬೌಲಿಂಗ್ ಮಾಡುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಹಿಟ್‌ಮ್ಯಾನ್ ಸ್ಪಷ್ಟ ಉತ್ತರವನ್ನು ನೀಡಲೇ ಇಲ್ಲ.
ಟಿ20 ಸರಣಿಗಾಗಿ ಭಾರತಕ್ಕೆ ತಂಡದ ಆಯ್ಕೆಯೇ ಸವಾಲು..!
ಆದರೆ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಕೆಲ ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿ, ‘ಈ ಸರಣಿ ವಿಶ್ವಕಪ್‌ಗೆ ತಂಡ ಆಯ್ಕೆ ಮಾಡಲು ನೆರವಾಗಲಿದೆ. ಈ ಸರಣಿ ಅಂತ್ಯದ ವೇಳೆಗೆ ಆಟಗಾರರ ಆಯ್ಕೆ ವಿಚಾರದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದಿದ್ದರು.
